ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುಕ್ ಮಾಡಿರುವ ಪ್ಯಾಂಟ್ ಸರಿಯಾದ ಸಮಯಕ್ಕೆ ತಲುಪಿಸದೆ, ಹಾಗೂ ಆರ್ಡರ್ ಅನ್ನು ಗ್ರಾಹಕರಿಗೆ ತಿಳಿಸದೇ ರದ್ದು ಮಾಡಿ, ಸೇವಾ ನ್ಯೂನತೆ ಎಸಗಿದ ಕಾರಣಕ್ಕಾಗಿ ಚಿತ್ರದುರ್ಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನಗರದ ಮ್ಯಾಕ್ಸ್ ಫ್ಯಾಷನ್ ಅವರಿಗೆ 10000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರಹಟ್ಟಿಯ ಎಸ್.ಎನ್. ಕೃಷ್ಣೇಗೌಡ ಅವರು ತಮ್ಮ ಸಹೋದರಿಯ ಹುಟ್ಟುಹಬ್ಬಕ್ಕಾಗಿ ಕಳೆದ 2024 ರ ಮೇ. 02 ರಂದು ಆನ್ಲೈನ್ನಲ್ಲಿ ಪ್ಯಾಂಟ್ ಒಂದನ್ನು ಮ್ಯಾಕ್ಸ್ ಫ್ಯಾಷನ್ ನಲ್ಲಿ ಬುಕ್ ಮಾಡಿ, ಮೊತ್ತವನ್ನು ಫೋನ್ಪೇ ನಲ್ಲಿ ಪಾವತಿಸಿದ್ದರು. ಅಲ್ಲದೆ, 6 ರಿಂದ 8 ದಿನಗಳ ಒಳಗಾಗಿ ಆರ್ಡರ್ ಡೆಲಿವರಿ ಮಾಡುವ ಭರವಸೆಯ ಸಂದೇಶವನ್ನು ಇ–ಮೇಲ್ನಲ್ಲಿ ಪಡೆದಿದ್ದರು.
ಆದರೆ ಬಳಿಕ 15 ದಿನಗಳು ಕಳೆದರೂ, ಆರ್ಡರ್ ಮಾಡಿದ ಪ್ಯಾಂಟ್ ನಿಗದಿತ ವಿಳಾಸಕ್ಕೆ ತಲುಪಿಲ್ಲ. ಬಳಿಕ ಕೃಷ್ಣೇಗೌಡರು ಕಸ್ಟಮರ್ ಕೇರ್ಗೆ ಕರೆ ಮಾಡಿದಾಗ, 24 ಗಂಟೆಯೊಳಗೆ ಆರ್ಡರ್ ತಲುಪಿಸುವ ಭರವಸೆಯನ್ನು ಕಸ್ಟಮರ್ ಕೇರ್ ಅವರು ನೀಡಿದ್ದರು. ಆದರೆ ಮೇ. 14 ರಂದು, ತಾವು ಬುಕ್ ಮಾಡಿರುವ ಪ್ಯಾಂಟ್ನ ಆರ್ಡರ್ ಅನ್ನು ರದ್ದುಪಡಿಸಲಾಗಿದೆ ಎಂಬ ಸಂದೇಶವನ್ನು ಕಳುಹಿಸಿದ ಮಾಕ್ಸ್ ಫ್ಯಾಷನ್, ಹಣವನ್ನು ಕೃಷ್ಣೇಗೌಡರಿಗೆ ಆನ್ಲೈನ್ನಲ್ಲಿಯೇ ಮರುಪಾವತಿ ಮಾಡಿತ್ತು.
ಹೀಗಾಗಿ ತಾವು ಮಾಡಿದ ಆರ್ಡರ್ ಅನ್ನು ನಿಗದಿತ ವೇಳೆಗೆ ಡೆಲಿವರಿ ಮಾಡದೆ ಹಾಗೂ ತಮ್ಮ ಗಮನಕ್ಕೆ ತಾರದೆ, ಆರ್ಡರ್ ಅನ್ನು ರದ್ದುಪಡಿಸಿದ ಕಂಪನಿಗೆ ಕೃಷ್ಣೇಗೌಡರು ಎರಡು ಬಾರಿ ಲೀಗಲ್ ನೋಟಿಸ್ ಕಳುಹಿಸಿದ್ದರು. ಕಂಪನಿಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ, ಬಳಿಕ ನ್ಯಾಯ ದೊರಕಿಸುವಂತೆ ಚಿತ್ರದುರ್ಗದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಆಯೋಗವು, ಗ್ರಾಹಕರಿಗೆ ಸೂಕ್ತ ಕಾರಣವಿಲ್ಲದೆ ಆರ್ಡರ್ ಅನ್ನು ರದ್ದುಪಡಿಸಿರುವುದು ಹಾಗೂ ಗ್ರಾಹಕರ ಗಮನಕ್ಕೆ ತಾರದೆ ಆರ್ಡರ್ ಅನ್ನು ರದ್ದುಪಡಿಸಿರುವುದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ, ಗ್ರಾಹಕರು ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರವಾಗಿ 5 ಸಾವಿರ ರೂ. ಹಾಗೂ ಕಂಪನಿಯ ಸೇವಾ ನ್ಯೂನತೆಗೆ ದಂಡವಾಗಿ 5 ಸಾವಿರ ರೂ. ಸೇರಿದಂತೆ ಒಟ್ಟು 10 ಸಾವಿರ ರೂ. ಗಳ ದಂಡವನ್ನು ಮ್ಯಾಕ್ಸ್ ಫ್ಯಾಷನ್ ಕಂಪನಿಯು ಗ್ರಾಹಕ ಕೃಷ್ಣೇಗೌಡರಿಗೆ ಪಾವತಿಸಬೇಕು ಎಂಬುದಾಗಿ ಚಿತ್ರದುರ್ಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಅಧ್ಯಕ್ಷೆ ಹೆಚ್. ಎನ್ .ಮೀನ ಮತ್ತು ಮಹಿಳಾ ಸದಸ್ಯೆ ಬಿ.ಹೆಚ್. ಯಶೋಧ ರವರು ಕಳೆದ ಫೆ. 17 ರಂದು ಆದೇಶ ಹೊರಡಿಸಿದ್ದಾರೆ.