ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಸೆಪ್ಟೆಂಬರ್- 17 ರಿಂದ ಅಕ್ಟೋಬರ್-2ರವರೆಗೆ ಸೇವಾ ಪಾಕ್ಷಕಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಸೇವಾ ಪಾಕ್ಷಿಕ ಕಾರ್ಯಕ್ರಮದ ರಾಜ್ಯ ಸಂಚಾಲಕ ಎನ್.ರವಿಕುಮಾರ್ ತಿಳಿಸಿದರು.
ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸೇವಾ ಪಾಕ್ಷಿಕ-2025ರ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಆಯೋಜನೆ ಮಾಡಲಾಗಿದ್ದು ರಾಜ್ಯದಲ್ಲೂ ಪ್ರಧಾನಿ ನರೇಂದ್ರ ಮೋದಿರವರ ಜನ್ಮ ದಿನದ ಅಂಗವಾಗಿ ಸೆ. 17 ರಿಂದ ಮಹಾತ್ಮ ಗಾಂಧಿ ಜಯಂತಿ ಅಕ್ಟೋಬರ್ 2ರವರೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಅಭಿಯಾನ, ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವುದು, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಕ್ರೀಡೆ ಹಾಗೂ ಚಿತ್ರಕಲಾ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಹಂತ-1ರಲ್ಲಿ ಸೆ.17 ರಂದು ರಕ್ತದಾನ ಶಿಬಿರ, ಹಂತ 2ರ ಸೆ.18 ರಿಂದ ಅ-2ರವರೆಗೆ ಮಂಡಲಗಳಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನ, ಸ್ವಚ್ಛತಾ ಅಭಿಯಾನದಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ರೈಲ್ವೆ ನಿಲ್ದಾಣ, ಬಸ್‍ನಿಲ್ದಾಣ, ದೇವಸ್ಥಾನ, ಉದ್ಯಾನವನ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಬೃಹತ್ ಸ್ಚಚ್ಛತಾ ಅಭಿಯಾನ ಆಯೋಜಿಸಲಾಗುವುದು ಇದಲ್ಲದೆ ಸಾರ್ವಜನಿಕರಿಗೆ ಸ್ಚಚ್ಛತೆಯೇ ಸೇವೆ ಎಂಬ ಪ್ರತಿಜ್ಞೆ ವಿಧಿ ಭೋಧಿಸಲಾಗುವುದು, ದಿವ್ಯಾಂಗರು ಮತ್ತು ಪ್ರಭುದ್ದರಿಗೆ ಸನ್ಮಾನ ನಡೆಸಲಾಗುವುದೆಂದು ರವಿ ಕುಮಾರ್ ತಿಳಿಸಿದರು.
ಮೋದಿಯವರ ಜೀವನ ಅಧಾರಿತ ಪ್ರದರ್ಶನ, ಪ್ರಬುದ್ಧರ ಗೋಷ್ಟಿ, ಸಾಕ್ಷ್ಯಚಿತ್ರ ವೀಕ್ಷಣೆ, ಪುಸ್ತಕ ವಿತರಣೆ, ಮೋದಿ ವಿಕಾಸ ಮ್ಯಾರಥಾನ್ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಸೇವಾ ಪಾಕ್ಷಿಕ ಅಭಿಯಾನದಲ್ಲಿ ಬಿಜೆಪಿಯ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಸಿದ್ದಾಪುರ ಸುರೇಶ್, ಸೇವಾ ಪಾಕ್ಷಿಕ ಜಿಲ್ಲಾ ಸಂಚಾಲಕ ಸಂಪತ್‍ಕುಮಾರ್, ಸಹ ಸಂಚಾಲಕ ಚಾಲುಕ್ಯ ನವೀನ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ಸೇರಿದಂತೆ ಮಂಡಲ ಹಾಗೂ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

