ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ವೇಣುಕಲ್ಲುಗುಡ್ಡದ ಶ್ರೀ ಗುರು ಹಾಲಪ್ಪಯ್ಯಸ್ವಾಮಿ ಮಠದ ಶ್ರೀ ಚಂದ್ರಶೇಖರಯ್ಯ ಸ್ವಾಮಿಗಳ ನೇತೃತ್ವದಲ್ಲಿ ಆವಿನ ಕಾಮರಾಯನ ಹರಿಯಬ್ಬೆ ಕಟ್ಟೆಮನೆಗೆ ಸೇರಿದ ಶ್ರೀ ಅಮ್ಮಾಜಿ ಏಳುಮಂದಿ ಅಕ್ಕಗಳ ಜಲಧಿ ಪೂಜಾ ಮಹೋತ್ಸವ ಮತ್ತು ಪೂಜಾರಿಕೆ ಪಟ್ಟದ ಕಾರ್ಯಕ್ರಮವನ್ನು ಏಪ್ರಿಲ್ 30 ರಿಂದ ಮೇ-1ರವರೆಗೆ ಏರ್ಪಡಿಸಲಾಗಿದೆ.
ಆವಿನ ಕಾಮರಾಯನ ಹರಿಯಬ್ಬೆ ಮೂಲ ಕಟ್ಟೆಮನೆಗೆ ಸೇರಿದ ಹರಿಯಬ್ಬೆ, ಮಂಗಳವಾಡ, ಮಧುಗಿರಿ, ಬರಗೂರು ಈ ನಾಲ್ಕೂ ಗುಡಿಕಟ್ಟಿನ ಗುರುಗಳು, ಪೂಜಾರಿಗಳು, ಯಜಮಾನರು, ಬಂಡಿಕಾರರು, ಕೋಲುಕಾರರು, ದಳವಾಯಿಗಳು, ಯಳವರು, ಛಲವಾದಿಗಳ ಸಮ್ಮುಖದಲ್ಲಿ ಎಲ್ಲಾ ಅಣ್ಣ-ತಮ್ಮಂದಿರುಗಳು, ಕಾಬುದಾರಿಗಳು, ನೆಂಟರು ಹಾಗೂ ಸಮಸ್ತ ಭಕ್ತಾಧಿಗಳು ಸೇರಿ ಈ ಕಾರ್ಯಕ್ರಮ ಆಯೋಜನೆ ಮಾಡಬೇಕಾಗಿದೆ.
ಆದರೆ ಕಳೆದ ವಾರ ಅಮ್ಮಾಜಿ ಏಳು ಮಂದಕ್ಕ ದೇವಿಗೆ ಪೂಜೆ ಮಾಡುತ್ತಿದ್ದ ಪೂಜಾರ್ ಹನುಮಂತಪ್ಪನವರು ನಿಧನರಾಗಿದ್ದು ಗ್ರಾಮದಲ್ಲಿ ಸೂತಕ ಛಾಯೆ ಇದೆ. ಇದರ ಮಧ್ಯ ಜಲ್ಧಿ ಮತ್ತು ಪೂಜಾರಿಕೆ ಪಟ್ಟ ಕಾರ್ಯವನ್ನು ಒಂದಿಷ್ಟು ದಿನ ಮುಂದೂಡಿ ಮಾಡಬೇಕಿದೆ. ಆದರೆ ಇದಕ್ಕೆ ಗಮನ ನೀಡಿಲ್ಲ.
ಗುರು ಮನೆಯ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡಿ ಸೂತಕ ಇರುವುದರಿಂದ ಕಾರ್ಯಕ್ರಮ ಮುಂದಿನ ದಿನದಲ್ಲಿ ಮಾಡಬೇಕು. ಅಲ್ಲದೆ ಪೂಜಾರಿಕೆ ಮಾಡುತ್ತಿದ್ದ ಹನುಮಂತಪ್ಪ ಅವರು ಹಂಗಾಮಿ ಅಥವಾ ಬೇನಾಮಿಯಾಗಿ ಪೂಜೆ ಸಲ್ಲಿಸುತ್ತಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ. ಆದ್ದರಿಂದ ಬೇನಾಮಿ ಅಥವಾ ಹಂಗಾಮಿ ಪೂಜಾರಿಕೆ ಮಾಡಲು ಸಾಧ್ಯವಿಲ್ಲ.
ಈ ಎರಡು ವಿಷಯಗಳನ್ನು ತುರ್ತಾಗಿ ಬಗೆ ಹರಿಸಬೇಕೆಂದು ಆವಿನ ಕುಂಚಿಟಿಗ ಕಟ್ಟೆಮನೆಯ ಗುರುಗಳಾದ ಶ್ರೀ ಚಂದ್ರಶೇಖರಯ್ಯ ಸ್ವಾಮಿಗಳಿಗೆ ಬರಗೂರು ಪೂಜಾರ್ ಬಂಡಿಯ ಬಂಡಿಕಾರ ಚಿಕ್ಕಿರಪ್ಪ, ಆ ಬಂಡಿಯ ಕುಳುವಳ್ಳಿಗಳಾದ ಪಿ.ಕೆ ಜಯಣ್ಣ, ವೀರಣ್ಣ, ಶಿವಕುಮಾರ್, ನವೀನ್ ಕುಮಾರ್, ವಿರೂಪಾಕ್ಷ, ಗೋವಿಂದರಾಜು, ಗುಂಡಪ್ಪ, ಕುಮಾರ್, ಮಹಾಲಿಂಗಪ್ಪ, ಪ್ರದೀಪ್ ಕುಮಾರ್, ಪುಟ್ಟ (ನಿಂಗಪ್ಪ), ತಿಪೇಸ್ವಾಮಿ, ಕಾಂತರಾಜು (ಭಟ್ಟ), ಗುಂಡಾಜನೇಯ, ಶಿವಲಿಂಗ, ಸಿದ್ದೇಶ್ ಮತ್ತಿತರರು ದೂರು ನೀಡಿ ನ್ಯಾಯ ಕೇಳಿದ್ದಾರೆ.