ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಹೊಲಿಗೆ ಹಾಗೂ ವಿಡಿಯೋಗ್ರಫಿ, ಜಿಮ್ /ಫಿಟ್ನೆಸ್ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಹೊಲಿಗೆ ತರಬೇತಿ 20 ದಿನಗಳಾಗಿದ್ದು, ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಫೇಲ್ ಅಥವಾ ಪಾಸ್ ಆಗಿರಬೇಕು. ನವೆಂಬರ್ 28 ರಿಂದ ಡಿಸೆಂಬರ್ 17ರವರೆಗೆ ತರಬೇತಿ ನೀಡಲಾಗುವುದು. ವಿಡಿಯೋಗ್ರಫಿ ತರಬೇತಿ 12 ದಿನಗಳಾಗಿದ್ದು, ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಫೇಲ್ ಅಥವಾ ಪಾಸ್ ಆಗಿರಬೇಕು. ತರಬೇತಿಯು ಡಿಸೆಂಬರ್ 6 ರಿಂದ 17 ರವರೆಗೆ ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ಜಿಮ್ / ಫಿಟ್ನೆಸ್ ತರಬೇತಿಗೆ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಪಾಸ್ ಆಗಿರಬೇಕು. ತರಬೇತಿಯು 15 ದಿನಗಳಾಗಿದ್ದು, ಡಿಸೆಂಬರ್ 3 ರಿಂದ 17 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ತರಬೇತಿಯು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ನಡೆಯುತ್ತದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ/ಯುವತಿಯರಿಗೆ ಲಘು ಉಪಹಾರ ಒದಗಿಸಲಾಗುವುದು. ಶಿಬಿರಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಅಭ್ಯರ್ಥಿಗಳ ವಯೋಮಾನ 18 ರಿಂದ 40 ವರ್ಷದೊಳಗಿನ ಯುವಕ/ಯುವತಿಯರು ಮಾತ್ರ ಭಾಗವಹಿಸಲು ಅರ್ಹರಾಗಿರುತ್ತಾರೆ. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಆಸಕ್ತ ಯುವಕ/ ಯುವತಿಯರು ತಮ್ಮ ಜನ್ಮ ದಿನಾಂಕದ ದಾಖಲೆಯೊಂದಿಗೆ (ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ) ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು–01, ಇಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ : 155265 ಹಾಗೂ ಮೊಬೈಲ್ ಸಂಖ್ಯೆ: 9731251411 ಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.