ಚಂದ್ರವಳ್ಳಿ ನ್ಯೂಸ್, ತುಮಕೂರು:
“ಪ್ರಜಾಪ್ರಭುತ್ವದ ಜೀವಂತಿಕೆಗೆ ವ್ಯಕ್ತಿಪೂಜೆಗಿಂತ ವ್ಯವಸ್ಥೆಯ ಸಮತೋಲನ ಮುಖ್ಯ. ಅಧಿಕಾರವು ಕೇವಲ ಒಂದು ಪಕ್ಷದ ಬಹುಮತದ ಅಬ್ಬರವಾಗದೆ, ಅಲ್ಲಿ ಕ್ರಿಯಾಶೀಲ ಹಾಗೂ ರಚನಾತ್ಮಕ ವಿರೋಧ ಪಕ್ಷದ ಧ್ವನಿಯೂ ಇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವವು ಅರ್ಥಪೂರ್ಣವಾಗಿ ಉಳಿಯಲು ಸಾಧ್ಯ ಎಂದು ಎಂದು ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ. ದತ್ತಾ ಅವರು ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ತುಮಕೂರು ವಿವಿ ಹಾಗೂ ಎನ್ಎಸ್ಎಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ’ವಿಕಸಿತ್ ಭಾರತ್ ಜಿಲ್ಲಾ ಮಟ್ಟದ ಯುವ ಸಂಸತ್ ಉತ್ಸವ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಅತಿಯಾಗಿ ವೈಭವೀಕರಿಸುವುದು ಅಥವಾ ’ವ್ಯಕ್ತಿಪೂಜೆ’ ಮಾಡುವುದು ವ್ಯವಸ್ಥೆಗೆ ಅಪಾಯಕಾರಿ. ಅಧಿಕಾರವು ಒಬ್ಬ ವ್ಯಕ್ತಿಯ ಹಂಗಿನಲ್ಲಿರಬಾರದು ಎಂಬ ಕಾರಣಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂಸದೀಯ ವ್ಯವಸ್ಥೆಯನ್ನು ಆರಿಸಿಕೊಂಡಿದ್ದರು ಎಂದು ವಿವರಿಸಿದರು.
ಪ್ರಜಾಪ್ರಭುತ್ವದ ಪರಿಕಲ್ಪನೆ ಕೇವಲ ಪಾಶ್ಚಿಮಾತ್ಯ ದೇಶಗಳಿಂದ ಬಂದಿದ್ದಲ್ಲ. ೧೨ನೇ ಶತಮಾನದಲ್ಲೇ ಬಸವಣ್ಣನವರು ’ಅನುಭವ ಮಂಟಪ’ದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಮಾದರಿಯನ್ನು ಪರಿಚಯಿಸಿದ್ದರು ಎಂಬುದನ್ನು ಅವರು ಹೆಮ್ಮೆಯಿಂದ ಸ್ಮರಿಸಿದರು.
೫೦ ವರ್ಷಗಳ ಹಿಂದೆ ದೇಶ ಎದುರಿಸಿದ ’ತುರ್ತು ಪರಿಸ್ಥಿತಿ’ಯ ಕರಾಳ ದಿನಗಳನ್ನು ನೆನಪಿಸಿಕೊಂಡ ದತ್ತಾ ಅವರು, ಇಂದಿನ ಯುವ ಪೀಳಿಗೆಗೆ ಅಂದಿನ ಸಂಘ? ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಪುನಃಸ್ಥಾಪನೆಯ ಕುರಿತು ಅರಿವಿರಬೇಕು. ಯುವಕರು ಕೇವಲ ಮೊಬೈಲ್ ಫೋನ್ಗಳಿಗೆ ಸೀಮಿತವಾಗದೆ, ಪುಸ್ತಕಗಳನ್ನು ಓದಬೇಕು ಹಾಗೂ ಇತಿಹಾಸದ ಸತ್ಯಾಸತ್ಯತೆಗಳನ್ನು ಅರಿಯಬೇಕು. ಅಲ್ಲಮಪ್ರಭುವಿನ ತಾತ್ತ್ವಿಕತೆ ಮತ್ತು ಅಂಬಿಗರ ಚೌಡಯ್ಯನವರ ನೈತಿಕ ಆಕ್ರೋಶಗಳು ನಮ್ಮ ಸಂವಿಧಾನವನ್ನು ಬಲಪಡಿಸಲು ಪ್ರೇರಣೆಯಾಗಬೇಕು ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಯುವಜನತೆ ದೇಶದ ಭವಿ?ವಲ್ಲ, ಬದಲಿಗೆ ವರ್ತಮಾನ. ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರು ಮೈಗೂಡಿಸಿಕೊಂಡಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ವಿಕಸಿತ ಭಾರತದ ಕನಸನ್ನು ನನಸು ಮಾಡಲು ಇಂತಹ ಯುವ ಸಂಸತ್ತುಗಳು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ದೇಶದ ನೀತಿ ನಿರೂಪಣೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಜ್ಞಾನ ಹೊಂದಿರಬೇಕು. ಸೃಜನಶೀಲ ಆಲೋಚನೆಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಯುವಶಕ್ತಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ, ವಿಶ್ವವಿದ್ಯಾನಿಲಯ ಕಲಾ ಕಾಲೇಜು ಪ್ರಾಂಶುಪಾಲ ಡಾ. ಜಿ. ದಕ್ಷಾಯಿಣಿ, ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರಾದ ಪ್ರೊ. ಎಂ. ಶೆಟ್ ಪ್ರಕಾಶ್, ಎನ್ಎಸ್ಎಸ್ ಕಾರ್ಯಕ್ರಮದ ಸಂಯೋಜಕರಾದ ಡಾ. ನಾಗಭೂ?ಣ ಬಗ್ಗನಡು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಈ ಯುವ ಸಂಸತ್ತಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ, ದೇಶದ ಜ್ವಲಂತ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

