ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮುಡಾ ಹಗರಣದಲ್ಲಿ ಅನಿವಾರ್ಯವಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಎದುರಾದರೆ ನಾನು ಕೂಡ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡುವೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಜೂನಿಯರ್, ಸೀನಿಯರ್ ಎಂಬ ಪ್ರಶ್ನೆ ಬರುವುದಿಲ್ಲ. ಶಾಸಕರು ಯಾರಿಗೆ ಬಹುಮತ ನೀಡ್ತಾರೋ ಅವರನ್ನು ಹೈಕಮಾಂಡ್ ಒಪ್ಪುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು ಹೈಕಮಾಂಡ್ ಆಶೀರ್ವಾದ ಇರುವ ವರೆಗೂ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಕೆಲವರು ಬಾಯಿಗೆ ಬಂದಂತೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಹಾಗೆ ಹೇಳಿಕೆ ನೀಡಿದವರೇ ಹಗುರ ಆಗುತ್ತಾರೆ ಎಂದು ಶಾಮನೂರು ಹೇಳಿದರು.
ಒಂದೆಡೆ ಸಿಎಂ ಹುದ್ದೆಯ ಆಕಾಂಕ್ಷಿತನದ ಬಗ್ಗೆ ಮಾತನಾಡಬಾರದು ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಬೇಕು ಎಂದು ಕೋರಿ ರಾಜ್ಯದ ಕೆಲವು ನಾಯಕರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ತಾವೂ ಸಿಎಂ ಆಗಲು ರೆಡಿ ಎಂದು ಹೇಳಿಕೆ ನೀಡುವ ಮೂಲಕ ಸಿಎಂ ಕುರ್ಚಿ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ದೊಡ್ಡದಾಗುತ್ತಿದೆ.