ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೊರೋನಾ, ಅಪಘಾತ ಸೇರಿದಂತೆ ಆಕಸ್ಮಿಕವಾಗಿ ಸಂಭವಿಸಿರುವ ಅವಘಡಗಳಿಂದ 200ಕ್ಕೂ ಹೆಚ್ಚು ವಿತರಕರನ್ನು ಕಳೆದುಕೊಂಡಿದ್ದರೂ ಸರ್ಕಾರ ನೆರವಿಗೆ ಧಾವಿಸಿಲ್ಲ ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಹೇಳಿದರು.
ಇಲ್ಲಿನ ಮುರುಘಾಮಠದ ಅನುಭವ ಮಂಟಪದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ವಿತರಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘಟನೆಯಿಂದಾಗಿ ಅನೇಕ ಬೇಡಿಕೆ ಈಡೇರಿವೆ. ಸಂಸ್ಥೆಗಳು ನೆರವಿಗೆ ಬಂದಿವೆ. ಚಿತ್ರದುರ್ಗದಲ್ಲಿ ವಿತರಕರಿಗೆ ಹಂಚಿಕೆ ಮಾಡಲಾದ 24 ಸೈಟು ತಡೆಹಿಡಿಯಲಾಗಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಕೊಡಿಸುವುದಲ್ಲದೆ ಇನ್ನುಳಿದವರಿಗೆ ಮಂಜೂರು ಮಾಡಬೇಕು. ಕ್ಷೇಮ ನಿಧಿ ಸ್ಥಾಪಿಸಿ, 10 ಕೋಟಿ ರೂ. ಮೀಸಲಿಡಬೇಕು. ಶಿಕ್ಷಣ, ಕಷ್ಟದ ವೇಳೆ ಬಳಸಲಾಗುವುದು ಎಂದು ತಿಳಿಸಿದರು.
ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ ಜನತಂತ್ರದ ನಿಜವಾದ ರೂಪ ಮುದ್ರಣ ಮಾಧ್ಯಮ. ಅದರಲ್ಲಿ ಪ್ರಮುಖ ಪಾತ್ರ ವಹಿಸುವುದು ಪತ್ರಿಕಾ ವಿತರಕರು. ಹಾಲು ತಲುಪಿಸುವವರು. ಕೋರಿಯರ್ ಸರ್ವೀಸ್ ಬಂದ ನಂತರ ಪೋಸ್ಟ್ ಮ್ಯಾನ್ ಗಳ ಕಾರ್ಯ ಕಡಿಮೆಯಾಗಿದೆ. ಇವರಿಗೆ ಸರ್ಕಾರಿ ಸಂಬಳ, ಸೌಲಭ್ಯ ಸಿಗಲಿದೆ. ಆದರೆ, ವಿತರಕರಿಗೆ ಈ ಅವಕಾಶವಿಲ್ಲ ಎಂದು ಹೇಳಿದರು.
ನಕಲಿ-ಅಸಲಿ ಮಾಧ್ಯಮಗಳಿವೆ-
ದೃಶ್ಯ ಮಾಧ್ಯಮದಲ್ಲಿ ಬಂದ ವರದಿ ಹಾಗೂ ಮರುದಿನ ಪತ್ರಿಕೆಯಲ್ಲಿ ಪ್ರಾಯೋಜಿತ ಪುಟದಲ್ಲಿ ಪೇಯ್ಡ್ ನ್ಯೂಸ್ ಬರುತ್ತೆ. ಇವೆರಡರಲ್ಲಿ ಯಾವುದು ಸತ್ಯ. ಪತ್ರಕರ್ತರು ಜಾಹೀರಾತು ಮತ್ತು ಇತರೆ ಮಾರ್ಕೇಟಿಂಗ್ ಮಾಡುವಂತ ಸ್ಥಿತಿ ಇದೆ. ಉದ್ಯಮವಾಗಿ ಬದಲಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.
ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಪಾದಕರ ಕೆಲಸ ಶ್ರೇಷ್ಠ, ವಿತರಕರ ಕೆಲಸ ಕನಿಷ್ಠವಲ್ಲ. ಸಾಮ್ಯತೆ, ಹೊಂದಾಣಿಕೆ ಇದ್ದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ. ಇನ್ನೂ ವಿಜಯ ಸಂಕೇಶ್ವರ ಅವರು ಯಾವುದೇ ಉದ್ಯಮಕ್ಕೆ ಕೈ ಹಾಕಿದರು ಯಶಸ್ವಿಯಾಗುತ್ತಿದೆ. ಇದಕ್ಕೆ ಕಾಯಕ ಶ್ರದ್ಧೆ ಬಹುಮುಖ್ಯ ಕಾರಣ. ವಿತರಕರ ಸಂಘಟನೆ ಇನ್ನಷ್ಟು ಬಲಗೊಳ್ಳಲಿ. ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ ಎಂದು ಅವರು ಹೇಳಿದರು.