ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರುನಾಡಿನ ಜಲಋಷಿ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕರೆದರೆ ತುಂಗಭದ್ರೆಯರೇ ಓಡೋಡಿ ಬರುವರೆಂಬ ಜನಜನಿತ ವಾದ ಮಾತಿಗೆ ಬಯಲು ಸೀಮೆಯ ಭರಮಸಾಗರ ವ್ಯಾಪ್ತಿಯ,
ಬರದನಾಡೆಂಬ ಅಪಖ್ಯಾತಿಯ ಜಗಳೂರು ತಾಲ್ಲೂಕಿನ 57 ಕೆರೆಗಳು ಭರಪೂರ ಮಳೆ ಮತ್ತು ಏತ ನೀರಾವರಿಯ ಯೋಜನೆಯಡಿ ತುಂಗ ಭದ್ರೆಯರು ಹರಿದ ಪರಿಣಾಮ ಮೈದುಂಬಿ ಹರಿಯುತ್ತಿವೆ.
ಜಗಳೂರು ಮತ್ತು ಭರಮಸಾಗರ ಕೆರೆಗೆ ಕಳೆದ ಭಾನುವಾರ ಶ್ರೀ ಜಗದ್ಗುರುಗಳವರು ಬಾಗೀನ ಸಮರ್ಪಿಸಿದ ಭಕ್ತಿ ಸಂಭ್ರಮದ ಉನ್ಮಾದದಲ್ಲಿ ಇರುವಾಗಲೇ ಸಿರಿಗೆರೆ ಸಮೀಪದ ಶಾಂತಿವನ ಜಲಾಶಯವು ಕಳೆದೊಂದು ವಾರದಿಂದ ತುಂಬಿ ಹರಿಯುತ್ತಿದೆ.
ವರ್ಷದಿಂದ ತುಂಬಿ ಹರಿದ ಸಂತೋಷ ಎಲ್ಲರ ಮನಸ್ಸುಗಳಿಗೆ ತಂಪು ನೀಡುತ್ತಿರುವ ಜೊತೆಗೆ ನಿನ್ನೆಯ ಸುರಿದ ಭರಪೂರ ಮಳೆಗೆ ಶಾಂತಿವನದ ಕಿರುಜಲಾಶಯವು ಮೈತುಂಬಿಕೊಂಡಿದೆ.
ಶ್ರೀ ಜಗದ್ಗುರುಗಳವರ ಕರಣಧಾರತ್ವದ ಹತ್ತಾರು ಏತನೀರಾವರಿ ಯೋಜನೆಯಡಿ 500 ಕ್ಕೂ ಅಧಿಕ ಕೆರೆಗಳ ಗಂಗಾವತರಣವಾಗಲು ಮೂಲ ಪ್ರೇರಣೆಯಂತಿರುವ ಶಾಂತಿವನ ಜಲಾಶಯವು ತುಂಬಿ ಹೆಚ್ಚುವರಿ ನೀರು ಭರಮಸಾಗರ ಕೆರೆಯತ್ತ ಹರಿಯಲು ಪ್ರಾರಂಭಿಸಿದೆ. ಈಗಾಗಲೇ ಸಿರಿಗೆರೆಯ ಮೂರು ಕೆರೆಗಳಲ್ಲಿ ಜಲ ಸಮೃದ್ಧಿಯಾಗಿರುವುದು.
ಈ ಭಾಗದ ರೈತರ ಮಖದಲ್ಲಿ ಮಂದಹಾಸ ಮೂಡಿದೆ. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿ ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡುವ ಮಹೋನ್ನತ ಉದ್ದೇಶದಿಂದ
ಶಾಂತಿವನದಲ್ಲಿ ನಿರ್ಮಾಣವಾಗಿರುವ “ಶಾಂತಿವನ ಕಿರುಜಲಾಶಯ”ವನ್ನು ಮಠದ ವೆಚ್ಚದಿಂದಲೇ ನಿರ್ಮಿಸಲಾಗಿದೆ. 400 ಎಕರೆ ವಿಸ್ತೀರ್ಣದ ಶಾಂತಿವನದ ಮಧ್ಯಭಾಗದಲ್ಲಿ ಅಂದಾಜು 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಲಾಶಯವು ಸುಮಾರು 2 ಕಿ.ಮೀ. ವಿಸ್ತೀರ್ಣದ ಉದ್ದ ಹೊಂದಿದ್ದು 40 ಅಡಿ ಆಳದಲ್ಲಿ ನೀರು ಸಂಗ್ರಹವಾಗಲಿದೆ.
ಸಿರಿಗೆರೆಯ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟವನ್ನು ಉತ್ಕೃಷ್ಟಗೊಳಿಸಿ, ಸುತ್ತಮುತ್ತಲಿನ ಪ್ರದೇಶದ ನೀರಿನ ಬವಣೆಯನ್ನು ಪರಿಹರಿಸಬೇಕೆಂದು ಸಂಕಲ್ಪಿಸಿದ ನಿತ್ಯ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪದ 20 ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ.