ಬೆಟ್ಟಿಂಗ್ ಆ್ಯಪ್ ಪರ ಪ್ರಚಾರ, ಶಿಖರ್ ಧವನ್ ಮತ್ತು ಸುರೇಶ್ ರೈನಾರ 11.14 ಕೋಟಿ ಮುಟ್ಟುಗೋಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ ಆಘಾತ ನೀಡಿದೆ.  
2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ಇಬ್ಬರು ಕ್ರಿಕೆಟಿಗರು ಬೆಟ್ಟಿಂಗ್ ಆ್ಯಪ್ ಪರ ಪ್ರಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಒಟ್ಟು 11.14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಇದರಲ್ಲಿ ರೈನಾ ಮ್ಯೂಚುಯಲ್ ಫಂಡ್ ಹಾಗೂ ಧವನ್ ಸ್ಥಿರ ಆಸ್ತಿ ಸೇರಿವೆ. ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಲುಕಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ ಆಘಾತ ನೀಡಿದೆ.

- Advertisement - 

ಮುಟ್ಟುಗೋಲು ಹಾಕಿಕೊಂಡಿರುವ 11.14 ಕೋಟಿ ರೂನಲ್ಲಿ ಸುರೇಶ್ ರೈನಾ ಅವರ ಹೆಸರಿನಲ್ಲಿರುವ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಶಿಖರ್ ಧವನ್ ಅವರ ಹೆಸರಿನಲ್ಲಿರುವ 4.5 ಕೋಟಿ ರೂ ಮೌಲ್ಯದ ಸ್ಥಿರ ಆಸ್ತಿ ಸೇರಿವೆ.

ಶಿಖರ್ ಧವನ್ ಹಾಗೂ ಸುರೇಶ್ ರೈನಾ ಇಬ್ಬರೂ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ಅನ್ನು ಪ್ರಚಾರ ಮಾಡಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಹಾಗೆಯೇ ಇವರಿಬ್ಬರು
1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳೊಂದಿಗೆ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

- Advertisement - 

ಏನಿದು ತನಿಖೆ?
ಭಾರತದಲ್ಲಿ ಸಾವಿರಾರು ನಕಲಿ ಬ್ಯಾಂಕ್ ಖಾತೆಗಳ ಮೂಲಕ
1xBet ಪ್ಲಾಟ್‌ಫಾರ್ಮ್ ಹಣದ ವಹಿವಾಟು ನಡೆಸುತ್ತಿತ್ತು ಎಂಬುದು ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ 6000ಕ್ಕೂ ಹೆಚ್ಚಿನ ನಕಲಿ ಖಾತೆಗಳು ಪತ್ತೆಯಾಗಿವೆ.
ಈ ಖಾತೆಗಳ ಮೂಲಕ ವಿವಿಧ ಪಾವತಿ ಗೇಟ್‌ವೇಗಳ ಮೂಲಕ ಬೆಟ್ಟಿಂಗ್ ಹಣದ ನಿಜವಾದ ಮೂಲವನ್ನು ಮರೆಮಾಡಲಾಗಿದೆ. ಇದುವರೆಗೆ
1000 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಇಡಿ-
ಬೆಟ್ಟಿಂಗ್ ಪ್ರಕರಣದಲ್ಲಿ ನಾಲ್ಕು ಪಾವತಿ ಗೇಟ್‌ವೇಗಳ ಮೇಲೆ ಇಡಿ ದಾಳಿ ನಡೆಸಿ
60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದುವರೆಗೆ 4 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಯಾವುದೇ ರೀತಿಯ ಆನ್‌ಲೈನ್ ಬೆಟ್ಟಿಂಗ್ ಅಥವಾ ಜೂಜಾಟ ಪ್ರಚಾರ ಅಥವಾ ಹೂಡಿಕೆಯಿಂದ ದೂರವಿರುವಂತೆ ಇಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟವು ಆರ್ಥಿಕ ನಷ್ಟ ಉಂಟುಮಾಡುವುದಲ್ಲದೆ, ಹಣ ವರ್ಗಾವಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಇಡಿ ಎಚ್ಚರಿಸಿದೆ.

ಯಾವುದೇ ಅನುಮಾನಾಸ್ಪದ ಆನ್‌ಲೈನ್ ಜಾಹೀರಾತುಗಳು ಅಥವಾ ವಹಿವಾಟುಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರು ಅಥವಾ ಇಡಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮನವಿ ಮಾಡಿದೆ.

 

 

Share This Article
error: Content is protected !!
";