ಚಂದ್ರವಳ್ಳಿ ನ್ಯೂಸ್, ರಾಮನಗರ:
ರೈಲ್ವೇ ಹಳಿ ಬಳಿ ಬಾಲಕಿಯ ಶವ ಪತ್ತೆಯಾದ ಪ್ರಕರಣದಲ್ಲಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಜಿಲ್ಲಾಡಳಿತದ ಪರವಾಗಿ ₹4,12,500 ಹಾಗೂ ಪಂಚಾಯ್ತಿ ವತಿಯಿಂದ 50,000 ರೂ.ಗಳ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ. ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರ ತನಿಖೆ ನಡೆಯಲಿದೆ. ಯಾರಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಡಿಸಿಎಂ ಕೇಳಿದರು. ಪೋಷಕರು ಯಾರ ಬಗ್ಗೆಯೂ ಅನುಮಾನವಿಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ದ್ವೇಷದಿಂದ ನಡೆದಿದೆಯೇ? ಅತ್ಯಾಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನಾವು ನ್ಯಾಯ ಒದಗಿಸುತ್ತೇವೆ ಎಂದು ಡಿಸಿಎಂ ಭರವಸೆ ನೀಡಿದರು.
ಮೃತ ಬಾಲಕಿ ಹಾಸ್ಟೆಲ್ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ರಜೆಗೆಂದು ಊರಿಗೆ ಬಂದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮಾತು ಬಾರದ, ಕಿವಿ ಕೇಳದಿದ್ದರೂ ಚುರುಕಾಗಿದ್ದ ಬಾಲಕಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದ ಡಿಕೆಶಿ ಹೇಳಿದರು.
ಈ ಊರಿನಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ ಎಂದು ಕೇಳಿದಾಗ, ಬಾಲಕಿ ಸಾವಿನ ಪ್ರಕರಣದ ಜೊತೆಗೆ ಬೇರೆ ವಿಚಾರ ಬೆರೆಸಲು ಹೋಗಲ್ಲ. ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ಆರೋಪಿಗಳ ಬಂಧನವಾಗಿದೆಯೇ ಎಂಬುದಕ್ಕೆ, ತನಿಖೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.