ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತರಾದ ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು, ಎಲ್ಲಾ ಪತ್ರಕರ್ತರೂ ತಮ್ಮ ವೃತ್ತಿ ಬದುಕಿನಲ್ಲಿ ಸಾಮಾಜಿಕ ಬದ್ಧತೆಯ ಕಳಕಳಿಯನ್ನು ಹೊಂದುವುದು ಮುಖ್ಯ ಎಂದರು.
ಪ್ರತಿಯೊಬ್ಬ ಪತ್ರಕರ್ತರೂ ಧಮನಿತರ ಧ್ವನಿಯಾದಾಗ ಮಾತ್ರ ಸಮಾಜಕ್ಕೆ ಅಗತ್ಯವಿರುವ ನ್ಯಾಯ ಒದಗಿಸಿದಂತಾಗುತ್ತದೆ. ತಾನೂ ಕೂಡಾ ವಿಧಾನ ಪರಿಷತ್‌ನಲ್ಲಿ ಮುಂದಿನ ದಿನಗಳಲ್ಲಿ ಪತ್ರಕರ್ತರ ಗಟ್ಟಿ ಧ್ವನಿಯಾಗುವೆ ಕೆಲಸ ಮಾಡುವೆ ಎಂದರು.
ತಾನು ಮೊದಲಿನಿಂದಲೂ ಸಮಾಜದ ವ್ಯವಸ್ಥೆಯಲ್ಲಿ ಹೋರಾಟ ಮನೋಭಾವವನ್ನು ರೂಢಿಸಿಕೊಂಡವನು. ಆ ಕಾರಣಕ್ಕಾಗಿ ಕೆ.ಯು.ಡಬ್ಲ್ಯೂ.ಜೆ. ಜೊತೆ ದೀರ್ಘಕಾಲದ ನಂಟನ್ನು ಬೆಳೆಸಲು ಸಾಧ್ಯವಾಯಿತು. ಹಾಗಾಗಿ ಕೆ.ಯೂ.ಡಬ್ಲ್ಯೂ.ಜೆ. ಮೈಸೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷನಾಗಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ದುಡಿಯಲು ನನ್ನಿಂದ ಸಾಧ್ಯವಾಗಿದೆ ಎಂದರು. ಪತ್ರಕರ್ತರು ಪ್ರಾಮಾಣಿಕರಾಗಿದ್ದರೆ, ಉತ್ತಮ ಸ್ಥಾನಮಾನಗಳು ಅವರನ್ನು ಅರಸಿ ಬರುತ್ತವೆ. ನಾನಂತೂ ನನ್ನ ಬದುಕಿನುದ್ದಕ್ಕೂ ಇದೇ ಮಾದರಿಯಲ್ಲಿ ಬಂದಿದ್ದೇನೆ. ಮುಂದೆಯೂ ಹೀಗೆಯೇ ಇರುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಶಿವಕುಮಾರ್‌ರಲ್ಲಿ ಸಾಮಾಜಿಕ ಬದ್ದತೆ ಇದೆ: ಕೆವಿಪಿ
ಇದೇ ವೇಳೆ ಅಭಿನಂದನಾ ಭಾಷಣ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ನೂತನ ವಿಧಾನ ಪರಿಷತ್ ಸದಸ್ಯರಾಗಿರುವ ಕೆ. ಶಿವಕುಮಾರ್ ಅವರು ಪತ್ರಕರ್ತರಾಗಿ ಬದ್ಧತೆಯನ್ನು ಮೆರೆದವರು ಎಂದು ಶ್ಲಾಸಿದರು.
ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ತನ್ನ ಪತ್ರಿಕಾ ವೃತ್ತಿಯ ಮೂಲಕ ಓದುಗರಿಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆ ಕಾರಣಕ್ಕಾಗಿಯೇ ವಿಧಾನ ಪರಿಷತ್ ಸದಸ್ಯರಾಗಲು ಆಯ್ಕೆಯು ಅತ್ಯಂತ ಸಮಂಜಸ ಎಂದೂ ಮುಖ್ಯಮಂತ್ರಿಗೂ ಅರಿವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ನೂತನ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರು ಮಾನವೀಯ ಅಂತ:ಕರಣ ಹೊಂದಿದವರು. ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದರು.
ಕೆಯುಡಬ್ಲೂಜೆ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಶಿವಕುಮಾರ್ ಸದಾ ನಮ್ಮೆಲ್ಲರ ಧ್ವನಿಯಾಗಿ ಪರಿಷತ್‌ನಲ್ಲಿ ಇರುತ್ತಾರೆ ಎನ್ನುವುದು ಹೆಮ್ಮೆ. ಸರ್ಕಾರದ ಬದ್ಧ ನಿಲುವುಗಳ ಜೊತೆ ಪತ್ರಕರ್ತರ ಸಮಸ್ಯೆಗಳಿಗೂ ಅವರು ಸದಾ ಸ್ಪಂದಿಸುವರೆಂಬ ನಿರೀಕ್ಷೆ ಇದೆ ಎಂದರು.
ಐಎ್ಡಬ್ಲೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜನಯ್ಯ ಮಾತನಾಡಿ, ಪತ್ರಕರ್ತರಾಗಿ ಬದ್ಧತೆಯಿಂದ ಕೆಲಸ ಮಾಡಿದ ಸರಳ ವ್ಯಕ್ತಿತ್ವದ ಶಿವಕುಮಾರ್ ಅವರ ಜನಪರ ಕಾರ್ಯ ಶ್ಲಾಘನೀಯ ಎಂದರು.
ಹರೀಶ್ ಗೌಡ ಅವರಿಗೆ ಅಭಿನಂದನೆ:
ನಟ, ನಿರ್ದೇಶಕ ದ್ವಾರಕೀಶ್ ಹೆಸರಿನಲ್ಲಿ ಕೆಯುಡಬ್ಲೂಜೆಯಲ್ಲಿ ಪ್ರಶಸ್ತಿಯನ್ನು ಸ್ಥಾಪನೆ ಮಾಡಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು, ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿದ ನಟ, ನಿರ್ದೇಶಕ ದ್ವಾರಕೀಶ್ ಅವರು ಮೂಲತ: ಹುಣಸೂರಿನವರಾಗಿರುವುದರಿಂದ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿರುವುದು ತನಗೆ ಬಹಳ ಸಂತಸದ ಮತ್ತು ಹೆಮ್ಮೆಯ ವಿಷಯ ಎಂದರು.
ಪತ್ರಕರ್ತರಾಗಿರುವ ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿರುವುದು ಅವರ ಸೇವೆಗೆ ಸಂದ ಗೌರವ ಎಂದು ಶ್ಲಾಸಿದರು.
ರಾಜ್ಯ ವಸತಿ ಸಚಿವರ ಮಾಧ್ಯಮ ಸಲಹೆಗಾರ ಕೆ. ಲಕ್ಷ್ಮೀನಾರಾಯಣ, ವಾರ್ತಾ ಇಲಾಖೆಯ ಹಿರಿಯ ಅಧಿಕಾರಿ ಪೂರ್ಣಿಮಾ, ಹಾಸನದ ಬಿ.ಆರ್.ಉದಯಕುಮಾರ್, ವಿಜಯಪುರದ ರಶ್ಮಿ ಮತ್ತಿತರರು ಸಮಾರಂಭದಲ್ಲಿ ಮಾತನಾಡಿ ಅಭಿನಂದಿಸಿದರು.
ಕೆಯೂಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು. ಕಾರ್ಯದರ್ಶಿ ಸೋಮಶೇಖರ ಕೆರೆಗೋಡು ವಂದಿಸಿದರು. ಕೆಯೂಡಬ್ಲ್ಯೂಜೆ ಕಾರ್ಯದರ್ಶಿ ಮತ್ತೀಕೆರೆ ಜಯರಾಂ, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

