ಶಿವಕುಮಾರ್‌ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷ ಬಿಡಲ್ಲ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ನಾವು ಅವರೊಂದಿಗೆ ಸೇರಿ ಸರ್ಕಾರ ಮಾಡಲ್ಲ. ಪಕ್ಷದಿಂದ ಹೊರಬಂದು ಚುನಾವಣೆ ಮಾಡುವುದು ಕಷ್ಟ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಡಿ.ಕೆ. ಶಿವಕುಮಾರ್‌ಕಾಂಗ್ರೆಸ್​ನಿಂದ ಹೊರಬಂದು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟರೆ ಒಪ್ಪುತ್ತೇವೆ. ಆದರೆ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಅದು ಕೇಂದ್ರದ ನಿರ್ಧಾರಕ್ಕೆ ಬಿಟ್ಟ ವಿಚಾರ. ಅಲ್ಲದೇ ಕೇಂದ್ರದ ವರಿಷ್ಠರು ಅವರನ್ನೇ ಮುಖ್ಯಮಂತ್ರಿ ಮಾಡಲು ನಾವೇ ಡಿ.ಕೆ. ಶಿವಕುಮಾರ್​ಗೆ ಬಾಹ್ಯ ಬೆಂಬಲ ಕೊಡುತ್ತೇವೆ ಎಂದರೆ ನಾವು ಒಪ್ಪುತ್ತೇವೆ. ಕೇಂದ್ರದವರು ಡಿ.ಕೆ. ಶಿವಕುಮಾರ್​ಗೆ ಮುಖ್ಯಮಂತ್ರಿ ಆಗಲು ಬಾಹ್ಯ ಬೆಂಬಲ ಕೊಡಿ ಎಂದರೆ ಅದಕ್ಕೆ ನಮ್ಮ ಯಾವುದೇ ತಕರಾರರಿಲ್ಲ ಎಂದು ಸದಾನಂದ ಗೌಡರು ತಿಳಿಸಿದರು.

- Advertisement - 

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಘನತೆ, ಗೌರವ, ಮಾನ, ಮರ್ಯಾದೆ ಇದೆಲ್ಲವೂ ಇದ್ದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಅವರು ಸರಕಾರ ವಿಸರ್ಜನೆ ಮಾಡಿ ಜನಾಶಿರ್ವಾದ ಪಡೆದುಕೊಂಡು ಬರಲಿ ಎಂದರು.

ಡಿ.ಕೆ. ಶಿವಕುಮಾರ್‌ಅವರು ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಗಲಿ ನಮ್ಮ ಅಭ್ಯಂತರವಿಲ್ಲ. ಆದರೆ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ ಆಗಬೇಕೆಂದರೆ ನಾವು ಸ್ವಲ್ಪ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.

- Advertisement - 

ಡಿ.ಕೆ. ಶಿವಕುಮಾರ್‌ಜೊತೆ 70 ಜನ ಶಾಸಕರು ಇದ್ದರೆ ಅವರನ್ನೇ ಕಾಂಗ್ರೆಸ್‌ಮುಖ್ಯಮಂತ್ರಿ ಮಾಡುತ್ತದೆ. ಅಲ್ಲದೇ ಕಾಂಗ್ರೆಸ್​ನ ಯಾವ ಶಾಸಕರೂ ಇದಕ್ಕೆ ವಿರೋಧ ಮಾಡಲ್ಲ. ಏಕೆಂದರೆ ಪುನಃ ಚುನಾವಣೆಗೆ ಹೋದರೆ ಗೆಲ್ಲುವುದಿಲ್ಲ ಎಂಬ ಖಾತ್ರಿ ಇದೆ. ಮೋದಿ ಮತ್ತು ಅಮಿಶ್‌ಶಾ ಹೇಳಿದಂತೆ ನಾವು ಕೇಳುತ್ತೇವೆ. ಬಿಜೆಪಿಗೆ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವ ವಿಶ್ವಾಸ ಇರುವಾಗ ಅವರೊಂದಿಗೆ ಸೇರಿದಂತೆ ಸರಕಾರ ಮಾಡುವ ಬಗ್ಗೆ ಸ್ವಲ್ಪ ಆಲೋಚನೆ ಮಾಡಬೇಕಿರುತ್ತದೆ. ಮಧ್ಯಂತರ ಚುನಾವಣೆ ಆಗಬಾರದು ಎಂದು ಗೌಡರು ಹೇಳಿದರು.

ರಾಜ್ಯಾದ್ಯಂತ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಬರುತ್ತಿಲ್ಲ. ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ಅನೇಕ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದ್ದಾರೆ. ಡಮ್ಮಿ ಮುಖ್ಯಮಂತ್ರಿಯಾಗಿದ್ದು, ಯಾವುದೇ ನೆರವಿಗೆ ಬರದೇ ಕಬ್ಬಡಿ ಆಟ ಆಡುತ್ತಿದ್ದಾರೆ ಎಂದು ಸದಾನಂದ ಗೌಡರು ಟೀಕಾ ಪ್ರಹಾರ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ ಸ್ವತಃ ತಮ್ಮ ರಾಜ್ಯದಲ್ಲಿಯೇ ನಡೆಯುತ್ತಿರುವ ಗೊಂದಲಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ರಾಜ್ಯ ಕಾಂಗ್ರೆಸ್‌ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದರೆ ಇದು ಟೀಕೆಗೆ ಒಳಗಾಗುತ್ತದೆ. ಹೀಗಾಗಿ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗೌಡರು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ್‌ಅವರು ತಮ್ಮ ಶಾಸಕರೊಂದಿಗೆ ಬಿಜೆಪಿ ಬಳಿ ಅಕಸ್ಮಾತ್‌ ಬಂದರೆ ಅವರಿಗೆ ಸಹಾಯ ಮಾಡಬೇಕೋ ಬೇಡವೋ ಎಂಬುದು ಹೈಕಮಾಂಡ್‌ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಗೌಡರು ತಿಳಿಸಿದರು.

 

 

 

 

 

Share This Article
error: Content is protected !!
";