ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಕಬ್ಬು, ಸಕ್ಕರೆ ಅಭಿವೃದ್ಧಿ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಸಬ್ಸಿಡಿ ಸೇರಿದಂತೆ ಸರ್ಕಾರದ ಸವಲತ್ತುಗಳ ದುರ್ಬಳಕೆ ಉದ್ದೇಶದ ಕಂಪನಿಗಳ ಬದಲಿಗೆ ಆಸಕ್ತ ಉದ್ಯಮಿಗಳಿಗೆ ಅವಕಾಶ ನೀಡಿ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಹೊಸದುರ್ಗ ಕ್ಷೇತ್ರದ ಶಾಸಕ ಗೋವಿಂದಪ್ಪ ಅವರು, ನಾವು ಯಾವುದೇ ಕಂಪನಿಯನ್ನು ಶಿಫಾರಸ್ಸು ಮಾಡುವುದಿಲ್ಲ. ಇಲಾಖೆ ಯಾವುದೇ ಕಂಪನಿಗೆ ಅವಕಾಶ ಕೊಡಲಿ, ಕ್ಷೇತ್ರದಲ್ಲಿ ಜವಳಿ ಪಾರ್ಕ್ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಕೆಲವರು ಕೇವಲ ಸಬ್ಸಿಡಿ ಪಡೆಯುವ ಉದ್ದೇಶದಿಂದ ಜವಳಿ ಪಾರ್ಕ್‍ಗೆ ಆಸಕ್ತಿ ತೋರಿಸುತ್ತಾರೆ. ನಂತರ ಅಭಿವೃದ್ಧಿ ಮಾಡುವ ಆಸಕ್ತಿ ಅವರಿಗೆ ಇರುವುದಿಲ್ಲ. ಅಂತಹ ಕಂಪನಿಗಳು ನಮಗೆ ಬೇಕಿಲ್ಲ. ಜವಳಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ ಉತ್ತೇಜನ ಕೊಡಿ ಎಂದು ಸಚಿವರು ಜವಳಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉದ್ದೇಶಿತ ಜವಳಿ ಪಾರ್ಕ್ ಸ್ಥಾಪನೆ ಯೋಜನೆ ಯಾವ ಹಂತದಲ್ಲಿ ಇದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವ ಶಿವಾನಂದ ಪಾಟೀಲ ಅವರು, ಕ್ಷೇತ್ರದ ಶಾಸಕ ಗೋವಿಂದಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈಗಾಗಲೇ ಉದ್ಯಮ ಸ್ಥಾಪನೆಗೆ ಮುಂದೆ ಬಂದಿರುವ ಕಂಪನಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಾಗಿ ಬೇರೆ ಕಂಪನಿಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಿ. ವಿಳಂಬ ಮಾಡದರೆ ತ್ವರಿತವಾಗಿ ಉದ್ಯಮ ಸ್ಥಾಪನೆ ಮಾಡುವ ಆಸಕ್ತರಿಗೆ ಅವಕಾಶ ನೀಡಿ ಎಂದು ಹೇಳಿದರು.
ಹೊಸದುರ್ಗ ತಾಲೂಕು ಅರಳಿಹಳ್ಳಿ ಗ್ರಾಮದಲ್ಲಿ 30 ಎಕರೆ ಭೂಮಿಯನ್ನು ಭೂ ಪರಿವರ್ತನೆ ಮಾಡಿ ಜವಳಿ ಉದ್ಯಮ ಅಭಿವೃದ್ಧಿ ಉದ್ದೇಶಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಭೂಮಿ ಮಂಜೂರಾತಿಗೆ ಕರ್ನಾಟಕ ರಾಜ್ಯ ಜವಳಿ ಅಭಿವೃದ್ಧಿ ನಿಗಮದಿಂದ ರೂ.23.30 ಲಕ್ಷ ಪಾವತಿ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಸಚಿವರ ಗಮನಕ್ಕೆ ತಂದರು.
ಹೊಸದುರ್ಗ ತಾಲೂಕು ಡಾ. ಡಿ.ಎಂ. ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲೂಕಾಗಿದ್ದು, 2011ರ ಜನಗಣತಿ ಪ್ರಕಾನ 30 ಸಾವಿರ ಯುವ ಪೀಳಿಗೆ ಇದೆ. 19 ಸಾವಿರ ಯುವಕರು ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. 11 ಸಾವಿರ ಯುವಕ, ಯುವತಿಯರು ನಿರುದ್ಯೋಗಿಗಳಿದ್ದಾರೆ. ಜವಳಿ ಪಾರ್ಕ್ ಸ್ಥಾಪನೆಯಿಂದ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅವರು ವಿವರಿಸಿದರು.
ಬೈನರಿ ಅಪರೆಲ್ ಪಾರ್ಕ್ ಪ್ರೈ ಲಿ ಈಗಾಗಲೇ ಹಿರಿಯೂರು ತಾಲೂಕಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಪರೆಲ್ ಪಾರ್ಕ್ ಸ್ಥಾಪನೆ ಮಾಡಿ 4 ಸಾವಿರ ಉದ್ಯೋಗ ಕಲ್ಪಿಸಿರುವುದಾಗಿ ತಿಳಿಸಿದ್ದು, ಹೊಸದುರ್ಗದಲ್ಲೂ ಉದ್ಯಮ ಸ್ಥಾಪನೆಗೆ ನೂರು ಕೋಟಿ ರೂ. ಬಂಡವಾಳ ಹೂಡಿ ಐದು ಸಾವಿರ ಜನರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದೆ. ಶಾಹಿ ಗಾಮೆರ್ಂಟ್ಸ್ ಕೂಡ ಆಸಕ್ತಿ ತೋರಿಸಿದೆ. ಈ ಕಂಪನಿ ಎಂಟು ಸಾವಿರ ಕೋಟಿ ರೂ. ವಹಿವಾಟು ಹೊಂದಿದ್ದು, 80 ಸಾವಿರಕ್ಕೂ ಅಧಿಕ ಉದ್ಯೋಗಾವಾಶ ಕಲ್ಪಿಸಿದೆ. ಅಪರೆಲ್ಸ್‍ನಲ್ಲಿ ಈಗ ಶಾಹಿ ಮೊದಲ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ತ್ವರಿತವಾಗಿ ಬಂಡವಾಳ ಹೂಡಿ, ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಅವಕಾಶ ಕಲ್ಪಿಸಬೇಕು ಹಾಗೂ ಕ್ಷೇತ್ರದ ಶಾಸಕ ಗೋವಿಂದಪ್ಪ ಅವರಿಗೆ ಯೋಜನೆಯ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ಸೂಚನೆ ನೀಡಿದರು.
ಹೊಸದುರ್ಗ ಶಾಸಕ ಗೋವಿಂದಪ್ಪ, ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಸ್‍ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ರವೀಂದ್ರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.