ಅಂದು ಚಳವಳಿಗಾರನಾಗಿ ಅವರ ಕೈಕುಲುಕಿದ್ದೆ-ಶಿವಾನಂದ ತಗಡೂರು

News Desk

ವ್ಯಕ್ತಿತ್ವದ ತೂಕಕ್ಕೆ ತಕ್ಕ ಹುದ್ದೆ ಪಡೆದ ಸಂಭ್ರಮ..
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗೂರು ನವಿಲೆ ಚಳವಳಿ ನಡೆಯುತ್ತಿದ್ದ ತೊಂಬತ್ತರ ದಶಕದಲ್ಲಿ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಹಾಸನ ವಾರ್ತಾ ಇಲಾಖೆ ಬಳಿಗೆ ಬಂದ ಗಂಭೀರ ಸ್ವಭಾವದವರೊಬ್ಬರು
, ನಾವು ಧರಣಿ ನಡೆಸುತ್ತಿದ್ದ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಹಾಜರಾಗಿದ್ದರು.

ಆಗ ಪ್ರಜಾವಾಣಿ ವರದಿಗಾರರಾಗಿದ್ದ ಎಂ.ನಾಗರಾಜ್ ಅವರು, ನನಗೆ ಇವರು ರುದ್ರಣ್ಣ ಹರ್ತಿಕೋಟೆ. ಸಂಯುಕ್ತ ಕರ್ನಾಟಕ ವರದಿಗಾರರಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಪರಿಚಯಿಸಿದರು. ಆಗ ಕೈ ಕುಲಕಿ ಪರಿಚಯ ಮಾಡಿಕೊಂಡಿದ್ದೆ ಮೊದಲು.

ಎರಡೂವರೆ ದಶಕಗಳ ಹಿಂದೆ ನಾನು ನೋಡಿದ್ದ ರುದ್ರಣ್ಣ ಹರ್ತಿಕೋಟೆ ಈಗಲೂ ಒಂದಿಷ್ಟು ಬದಲಾಗಿಲ್ಲ. ಅದೇ ಸ್ವಭಾವ. ಅದೇ ನಡೆ- ನುಡಿ. ಮೌನ‌ಧರಿಸಿದ್ದ ವ್ಯಕ್ತಿತ್ವ.

ಬಾಗೂರು ನವಿಲೆ ಸುರಂಗ ಸಂತ್ರಸ್ಥರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸತತ 36 ದಿನ ಧರಣಿ, ಅಲ್ಲಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ, ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಎದುರು ಹತ್ತು ದಿನ ಸರಣಿ ಸತ್ಯಾಗ್ರಹ… ಹೀಗೆ ಚಳವಳಿ ಹಾದಿಯಲ್ಲಿದ್ದ ನಾನು ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ಪೂರ್ಣ ಪ್ರಮಾಣದಲ್ಲಿ ಪತ್ರಿಕೋದ್ಯಮಕ್ಕೆ ಹೊರಳಿದೆ.

ಸಂಯುಕ್ತ ಕರ್ನಾಟಕದಲ್ಲಿ ಹಲವು ಜಿಲ್ಲೆಯಲ್ಲಿ ಕೆಲಸ ಮಾಡಿದ ರುದ್ರಣ್ಣ, ಜನವಾಹಿನಿ ಸೇರಿದರು. ನಂತರ ಉದಯವಾಣಿ ಪತ್ರಿಕೆ ವರದಿಗಾರರಾಗಿ ಬಳಿಕ ವಿಜಯವಾಣಿಗೆ ಬಂದರು.
ಅಷ್ಟೊತ್ತಿಗೆ ಒಂದೂವರೆ ದಶಕ ಕಳೆದಿತ್ತು. ವಿಜಯ ಕರ್ನಾಟಕದಿಂದ ವಿಜಯವಾಣಿಗೆ ಬಂದ ಮೇಲೆ ರುದ್ರಣ್ಣ ಹರ್ತಿಕೋಟೆ ಅವರ ಜೊತೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ವಿಜಯವಾಣಿ ಪತ್ರಿಕೆಯ ಜೊತೆಯಾಗಿ ರುದ್ರಣ್ಣ ಜೊತೆಗೆ 14 ವರ್ಷ ಸವೆಸಿದ್ದು ಗೊತ್ತಾಗಲೇ ಇಲ್ಲ.

ವೃತ್ತಿ ಪರವಾದ ಸಿಟ್ಟು, ಸೆಡವು ಬಿಟ್ಟರೆ ಬೇರೇನಿರಲಿಲ್ಲ. ಎಂದೂ ಜಗಳವಾಡಲಿಲ್ಲ. ಅಷ್ಟರ ಮಟ್ಟಿಗೆ ಅವರ ಜೊತೆಗೆ ಒಂಥರ ಅವಿನಾಭಾವ ಸಂಬಂಧ ಬೆಸೆದುಕೊಂಡಿತ್ತು.

ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿ ರುದ್ರಣ್ಣ ಅವರ ನೇಮಕಾತಿ ಆದೇಶ ಪ್ರಕಟಣೆ ಹೊರಬಿದ್ದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಮತ್ತೊಂದೆಡೆ ವಿಜಯವಾಣಿ ಬಳಗ ಬಿಟ್ಟು ಹೋಗುತ್ತಿದ್ದಾರಲ್ಲ ಎನ್ನುವ ನೋವು ಕಾಡಿತು.

ವಿಜಯವಾಣಿಗೆ ಶನಿವಾರ ರುದ್ರಣ್ಣ ತಮ್ಮ ಪತ್ನಿ ಭಾರತಿ, ಇಬ್ಬರು ಮಕ್ಕಳ ಜೊತೆಯಲ್ಲಿಯೇ ಬಂದಿದ್ದರು. ಅಲ್ಲಿ ಎಲ್ಲಾ ಹಳೆಯ ಘಟನೆಗಳನ್ನು ಮೆಲುಕು ಹಾಕಿದೆವು.

ಅವರಿಗಾಗಿಯೇ ಏರ್ಪಡಿಸಿದ್ದ ಆ ಬೀಳ್ಕೊಡುಗೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಮಾಡಿದ್ದು ಮಾತ್ರ ಸಂಪಾದಕರಾದ ಕೆ.ಎನ್.ಚನ್ನೇಗೌಡರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ಪ್ರೀತಿಯ ವಾತಾವರಣದಲ್ಲಿ ಮಿಂದೆದ್ದ ರುದ್ರಣ್ಣ ದಂಪತಿಗಳು ನಿಜಕ್ಕೂ ಭಾವುಕರಾದರು. ಇಡೀ ವಿಜಯವಾಣಿ ಬಳಗ ಅವರಿಗೆ ಶುಭ ಹಾರೈಸಿ ಬೀಳ್ಕೊಟ್ಟ ಸಂದರ್ಭದಲ್ಲಿ ರುದ್ರಣ್ಣ ಅವರಿಗೆ ಅಷ್ಟೆ ಅಲ್ಲ, ಅವರ ಕುಟುಂಬಕ್ಕೂ ಹೃದಯತುಂಬಿ ಬಂದ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದು ಮಾತ್ರ ಸಾರ್ಥಕ ಕ್ಷಣ.

ವ್ಯಕ್ತಿಯ ಘನತೆಗೆ ಸಿಕ್ಕ ಹುದ್ದೆ ಎಂಬ ಅಭಿಮಾನದ ಮಾತುಗಳು ಕೇಳಿಬಂದವು. ಒಂದು ಸುದ್ದಿಮನೆ, ಸುಧೀರ್ಘವಾಗಿ ಕೆಲಸ ಮಾಡಿದ ತನ್ನ ಸಹೋದ್ಯೋಗಿಗೆ ಬೀಳ್ಕೊಟ್ಟ ರೀತಿ ಮಾತ್ರ ಎಂದೂ ಮರೆಯಲಾಗದ ಕ್ಷಣ. ರುದ್ರಣ್ಣ ಅವರಿಗೆ ಶುಭವಾಗಲಿ. ಮಾಹಿತಿ ಆಯೋಗದ ಆಯುಕ್ತರಾಗಿ ತಮ್ಮ ಸಾಕ್ಷಿಗುಡ್ಡೆಗಳನ್ನ ರುದ್ರಣ್ಣ ಹರ್ತಿಕೋಟೆ ನಿರ್ಮಿಸಲಿ.
ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು.

Share This Article
error: Content is protected !!
";