ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಪ್ರೊ. ದೊಡ್ಡ ರಂಗೇಗೌಡ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಯ ವೈದ್ಯರಲ್ಲಿ ದೊಡ್ಡ ರಂಗೇಗೌಡರ ಆರೋಗ್ಯ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಪ್ರೊ. ದೊಡ್ಡ ರಂಗೇಗೌಡರ ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದಾಗಿ ತಿಳಿಸಿದರು.
ಸಾಹಿತಿ ದೊಡ್ಡ ರಂಗೇಗೌಡರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ಒದಗಿಸುವಂತೆ ಸಚಿವರು ವೈದ್ಯರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಪ್ರೊ. ದೊಡ್ಡರಂಗೇಗೌಡರ ಕುಟುಂಬ ಸದಸ್ಯರನ್ನು ಸಹ ಭೇಟಿ ಮಾಡಿ ಕುಟುಂಬದವರಿಗೆ ಧೈರ್ಯ ಹೇಳಿದರು.
ಪ್ರೊ.ದೊಡ್ಡ ರಂಗೇಗೌಡರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ, ಅವರ ಬಗ್ಗೆ ಅಪಾರವಾದ ಕಾಳಜಿ ಇದೆ. ಸರ್ಕಾರದಿಂದ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಸಚಿವರು ತಿಳಿಸಿದರು.
ದೊಡ್ಡರಂಗೇಗೌಡರು ಸಾಹಿತಿಗಳು ಮಾತ್ರವಲ್ಲ, ಕನ್ನಡ ಗೀತೆಗಳನ್ನು ರಚಿಸಿದ್ದಾರೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಹಲವಾರು ನಟರ ಚಿತ್ರಗಳಿಗೆ ಗೀತೆ ರಚನೆ ಮಾಡಿ ಬಹುದೊಡ್ಡ ಹೆಸರು ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.