ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾದ ನಂತರ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುತ್ತಿರುವುದು ಕಾವೇರಿ ಜಲನಯಯ ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ನಾಲೆಗಳಿಗೆ ನೀರು ಹರಿಸುತ್ತೇವೆ, ಕೆರೆ ತುಂಬಿಸುತ್ತೇವೆ ಎಂದು ಬಾಯಿ ಮಾಹಿತಿನಲ್ಲಿ ರೈತರ ಮೂಗಿಗೆ ತುಪ್ಪ ಸವರಿ, ಎಂದಿನಂತೆ I.N.D.I ಮಿತ್ರಕೂಟದ ಡಿಎಂಕೆ ಸರ್ಕಾರ ಹಾಗೂ ರಾಹುಲ್ ಗಾಂಧಿ ಅವರ ಪರಮಾಪ್ತ ಮಿತ್ರ ಸಿಎಂ ಸ್ಟಾಲಿನ್ ಅವರನ್ನು ಮೆಚ್ಚಿಸಲು ತಮಿಳುನಾಡಿಗೆ ಎಗ್ಗಿಲ್ಲದೆ ನೀರು ಹರಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ತಾವು ಬಾಗಿನ ಅರ್ಪಿಸಿ ನಾಲೆಗಳಿಗೆ ನೀರು ಬಿಡುತ್ತೇವೆ, ಕೆರೆಗಳನ್ನು ತುಂಬಿಸುತ್ತೇವೆ ಎಂದು ಘೋಷಣೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು 5 ದಿನ ಕಳೆದಿದೆ. ಆದರೂ ಅಧಿಕಾರಿಗಳು ತಮ್ಮ ಮಾತಿಗೆ ಕ್ಯಾರೆ ಎನ್ನದೆ ತಮಿಳುನಾಡಿಗೆ ಎಗ್ಗಿಲ್ಲದೆ ಧಾರಾಳವಾಗಿ ಹರಿಬಿಡುತ್ತಿದ್ದಾರೆ.
ಅಧಿಕಾರಿಗಳು ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವೋ ಅಥವಾ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಸೂಚನೆ ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರೆಸಲು ಸೂಚನೆ ಕೊಟ್ಟಿದ್ದಾರೋ? ಅಥವಾ ನಿಮ್ಮ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ ಅಧಿಕಾರಿಗಳಲ್ಲಿ ಗೊಂದಲ ಉಂಟು ಮಾಡಿದೆಯೋ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಉತ್ತಮ ಮಳೆಯಾಗಿರುವಾಗ ಅದನ್ನ ಬಳಿಸಿಕೊಂಡು, ನಾಲೆಗಳಿಗೆ ನೀರು ಹರಿಸಿ, ಕೆರೆ ತುಂಬಿಸಿ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ರಾಜ್ಯ ಸರ್ಕಾರ ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸುವುದು ನಾಡಿನ ಅನ್ನದಾತರಿಗೆ ಮಾಡುತ್ತಿರುವ ಮೋಸ, ನಯವಂಚನೆ.
ನಾವು ಸರ್ಕಾರಕ್ಕೆ 24 ಗಂಟೆ ಸಮಯ ಕೊಡುತ್ತೇವೆ. ನಾಳೆ ಸಂಜೆಯೊಳಗೆ ಕೆಆರ್ ಎಸ್ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಸೂಚನೆ ಕೊಟ್ಟಿರುವಂತೆ ನೀರನ್ನು ನಾಲೆಗಳಿಗೆ ಬಿಡಬೇಕು ಮತ್ತು ಕೆರೆಗಳನ್ನು ತುಂಬಿಸಲು ಬಳಸ ಬೇಕು. ಇಲ್ಲದಿದ್ದರೆ ನಾಳೆ ರಾತ್ರಿ ಕೆಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.