ಭದ್ರಾ ಯೋಜನೆಗೆ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಧ್ಯ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕು ಮತ್ತು ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್‌ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ನೀರಾವರಿ ಯೋಜನೆ, ವಿಷಯಗಳಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕೇಂದ್ರದ ಗಮನ ಸೆಳೆದಿದ್ದಾರೆ. ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿಯಿರುವ ಕರ್ನಾಟಕದ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಅನುಮೋದನೆ ನೀಡಲು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಬಿಡುಗಡೆ ಮಾಡಲು ವೈಯಕ್ತಿಕವಾಗಿ ಗಮನ ಹರಿಸುವಂತೆ ಸಚಿವ ಸಿ.ಆರ್.ಪಾಟೀಲ್​ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದೇಶದಲ್ಲೇ ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ.

ಉತ್ಪಾದನೆಯಲ್ಲಿನ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯದ ಬಾಕಿಯಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ, ಪ್ರಸ್ತಾವನೆಗಳಿಗೆ ಅನುಮತಿ, ಕ್ಲಿಯರೆನ್ಸ್‌ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗಲಿದೆ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ.

 

Share This Article
error: Content is protected !!
";