ಎಸ್ಐಟಿ ಬಗ್ಗೆಯೇ ತನಿಖೆಯಾಗಲಿ, ಸಂಕಷ್ಟ ಬಂದಾಗ ಜಾತಿ ಮುಂದು ಮಾಡುವ ಸಿದ್ದರಾಮಯ್ಯ- ಸಿಟಿ ರವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾತಿ ಗಣತಿ ವಿಷಯ ಮುನ್ನಲೆಗೆ ಬಂದಿದ್ದು ಸೂಕ್ಷ್ಮವಾಗಿ ನೋಡಿದರೆ ಸಿದ್ದರಾಮಯ್ಯ ಅವರಿಗೆ ಯಾವಾಗ ಸಂಕಟ ಬರುತ್ತೋ ಅವಾಗ ಈ ಜಾತಿ ಮುಂದೆ ತಂದು ವಾಲ್ಮೀಕಿ, ಮುಡಾ ಹಗರಣದ ಭ್ರಷ್ಟಚಾರ ಬೇರೆಡೆ ಗಮನ ಸೆಳೆಯುತ್ತಾರೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಹಗರಣ, ಮುಡಾ ಹಗರಣದಿಂದ ಕಾಂಗ್ರೆಸ್ ಸರ್ಕಾರ ಜರ್ಜರಿತವಾಗಿದೆ. ಇದರಿಂದಾಗಿ ಭ್ರಷ್ಟ ಸರ್ಕಾರ ಎನ್ನುವ ಇಮೇಜ್ ಅಂಟಿಸಿಕೊಂಡಿದೆ. ಹಾಗಾಗಿ ವಾಲ್ಮೀಕಿ, ಮುಡಾ ಹಗರಣವನ್ನು ಬೇರೆಡೆ ಗಮನ ಹರಿಸಲು ಜಾತಿ ಗಣತಿ ಮುನ್ನಲೆಗೆ ತಂದು ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

ಸಿದ್ದರಾಮಯ್ಯ ಅವರಿಗೆ ಬದ್ದತೆ ಇದ್ದಿದ್ದರೆ 2018ರಲ್ಲೇ ಕಾಂತರಾಜ್ ವರದಿ ನೀಡಿದ್ದು ಅಂದೇ ಜಾರಿ ಮಾಡಬಹುದಿತ್ತು, ಅವರು ಏಕೆ ಅಂದು ಜಾರಿ ಮಾಡಲಿಲ್ಲ, ಈಗ ವಿಷಯಾಂತರ ಮಾಡಲು ಸಿದ್ದರಾಮಯ್ಯ ಜಾತಿ ಗಣತಿ ಮುನ್ನಲೆಗೆ ತಂದಿದ್ದಾರೆ ಎಂದು ದೂರಿದರು.

ಬಿಜೆಪಿ, ಆರ್ಎಸ್ಎಸ್ ಮೀಸಲಾತಿ ವಿರೋಧಿ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ನೆಹರೂ ಅವರು ಪ್ರಧಾನಿ ಆಗಿದ್ದಾಗ ಮೀಸಲಾತಿ ಎನ್ನುವುದು ಅಭಿವೃದ್ಧಿ ವಿರೋಧಿ ಆಗಿದ್ದು ಈ ಕುರಿತು ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದರು ಎಂದು ಕಾಂಗ್ರೆಸ್ ಪಕ್ಷವನ್ನು ಮೀಸಲಾತಿ ವಿರೋಧಿ ಎಂದು ಸಿಟಿ ರವಿ ಬಣ್ಣಿಸಿದರು.

ನೆಹರೂ ಅವರ ಮೀಸಲಾತಿ ವಿರೋಧಿ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿ ಕಾಂಗ್ರೆಸ್ ಬದ್ಧತೆಯನ್ನು ಎತ್ತಿ ತೋರಿಸಿದ್ದರು ಎಂದು ತಿಳಿಸಿದರು.

ಬಿಜೆಪಿ ಎಂದೂ ಮೀಸಲಾತಿ ವಿರೋಧಿಯಲ್ಲ. ಎಸ್ಸಿ ಮೀಸಲಾತಿ ಪ್ರಮಾಣವನ್ನು 15 ರಿಂದ 17ಕ್ಕೆ ಏರಿಕೆ ಮಾಡಲಾಯಿತು. ಎಸ್ಟಿ ಮೀಸಲಾತಿಯನ್ನ 3 ರಿಂದ 7ಕ್ಕೆ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ. ಬಡ್ತಿ ಮೀಸಲಾತಿ ಪರವಾಗಿ ನಿಂತು ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದು ಬಿಜೆಪಿ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಮಾನ್ಯಟೆ ಕೊಟ್ಟಿದ್ದು ಬಿಜೆಪಿ ಸರ್ಕಾರ. ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾದ ಪ್ರಾಮಾಣಿಕ ಬದ್ದತೆ ಬಿಜೆಪಿ ಪಕ್ಷಕ್ಕೆ ಇದೆ ಎಂದು ತಿಳಿಸಿದರು.

ಆದರೆ ಸಿಎಂ ಸಿದ್ದರಾಮಯ್ಯ ಅವರ ಜಾತಿ ಗಣತಿ ಜಾರಿಯ ಪ್ರಾಮಾಣಿಕತೆ ಬಗ್ಗೆ ನಮಗೆ ಅನುಮಾನವಿದೆ. ತಮ್ಮ ಸರ್ಕಾರದ ಮೇಲೆ ಬಂದಿರುವ ಭ್ರಷ್ಟಾಚಾರ ಮರೆ ಮಾಚಲು ಮುನ್ನೆಲೆಗೆ ತಂದಿರುವ ಅನುಮಾನವಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕನಿಷ್ಠ ಬದ್ಧತೆ ಇದ್ದರೆ ಕೂಡಲೇ ಒಳ ಮೀಸಲಾತಿ ಅನುಷ್ಠಾನ ಮಾಡಲಿ, ಕೇವಲ ಎಸ್ಸಿ, ಎಸ್ಟಿ ವರ್ಗಗಳಿಗೆ ಒಳ ಮೀಸಲಾತಿ ನೀಡಿದರೆ ಸಾಲದು, ಹಿಂದುಳಿದ ವರ್ಗಗಳಲ್ಲೂ ಒಳ ಮೀಸಲಾತಿ ಜಾರಿಗೆ ತಂದು ತಾನೊಬ್ಬ ಹಿಂದುಳಿದ ನಾಯಕ ಎಂದು ಸಾಬೀತು ಮಾಡಲಿ ಎಂದು ಸಿಟಿ ರವಿ ಸವಾಲ್ ಹಾಕಿದರು.

ಆಧಾರ್ ಕಾರ್ಡ್ ಆಧಾರದ ಮೇಲೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸಮೀಕ್ಷೆ ಮಾಡಲಿ. ಹಿಂದುಳಿದ ವರ್ಗಗಳಲ್ಲಿ ಕೂಡಾ ಒಳ ಮೀಸಲಾತಿ ನೀಡಲಿ. ದಲಿತರಂತೆ ಹಿಂದುಳಿದ ವರ್ಗಗಳಿಗೂ ಒಳ ಮೀಸಲಾತಿ ಕೊಡಲಿ. ಕರ್ನಾಟಕ ರಾಜ್ಯ ಒಂದು ಹೊಸ ಮುನ್ನುಡಿಯನ್ನ ಬರೆಯಲಿ.

ಹಿಂದುಗಳ ಒಳಗೆ ಒಡಕು ಮೂಡಿಸಲು ದುರ್ಬಳಕೆ ಆಗಬಾರದು. ಮುಸ್ಲಿಂ ನಲ್ಲಿ ಕೂಡಾ ಬಹಳ ಜಾತಿಗಳಿದ್ದು, ಅಲ್ಲಿಯೂ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿ. ಮುಸ್ಲಿಂ ಸಮುದಾಯಕ್ಕೂ ನ್ಯಾಯ ಸಿಗಬೇಕಿದೆ, ಅವಕಾಶ ವಂಚಿತ ಜಾತಿಗಳಿವೆ. ಮುಸ್ಲಿಂ ಸಮುದಾಯದ ಸಮೀಕ್ಷೆಯೂ ಕೂಡಾ ಆಗಬೇಕಿದೆ. ರಾಜ್ಯದ ಜನರಿಗೆ ಜಾತಿ ಗಣತಿ ಯಾವ ಕಾರಣಕ್ಕೆ ತರುತ್ತಿದ್ದೀರಿ ಎಂದು ತಿಳಿದಿದೆ. ಆ ಕಾರಣಕ್ಕೆ ಜಾರಿ ಆದರೆ ರಾಜ್ಯದ ಜನ ಕ್ಷಮಿಸಲ್ಲ ಎಂದು ರವಿ ಎಚ್ಚರಿಸಿದರು.

ವಾಲ್ಮೀಕಿ ಹಗರಣ ಕುರಿತು ವರದಿ ಇಡಿ ಈಗಾಗಲೇ ನೀಡಿದೆ. 42 ಕೋಟಿ ಹಣ ನಾಗೇಂದ್ರ ಕಡೆ ಹೋಗಿದೆ. ಅದರಲ್ಲಿ 20 ಕೋಟಿ ಹಣ ಲೋಕಸಭಾ ಎಲೆಕ್ಷನ್ ಗೆ ಬಳಕೆ ಮಾಡಿದೆ ಎಂದು ಇಡಿ ವರದಿ ನೀಡಿದೆ ಎಂದು ಹೇಳಿದರು.

ಎಸ್ಐಟಿ ಬಗ್ಗೆ ತನಿಖೆ ಆಗಲಿ-
ಎಸ್ಐಟಿ ತನಿಖೆಯಲ್ಲಿ ನಾಗೇಂದ್ರ ಮತ್ತು ದದ್ದಲ್ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ ಆದರೆ ಇಡಿ ವರದಿಯಲ್ಲಿ ನಾಗೇಂದ್ರ ಅವರೇ ಕಿಂಗ್ ಪಿನ್ ಎಂದು ವರದಿ ಬಿಡುಗಡೆ ಮಾಡಿದೆ.
SIT ಸಲ್ಲಿಸಿರುವ ಚಾರ್ಜ್ ಶೀಟ್ ನೋಡಿದ್ರೆ ಎಸ್ಐಟಿ ಬಗ್ಗೆ ಅನುಮಾನವಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ SIT ಬಗ್ಗೆ ತನಿಖೆ ನಡೆಸಬೇಕು STI ರಚನೆ ಹಗರಣ ಮುಚ್ಚಿ ಹಾಕಲು ಮಾಡಿದ್ದಾರೆ, ಅದರ ಮೇಲೂ ತನಿಖೆ ಆಗಬೇಕು ಎಂದು ಸಿಟಿ ರವಿ ಒತ್ತಾಯಿಸಿದರು.

ರಾಜ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದು ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇಡೀ ರಾಜ್ಯ ಸೇರಿದಂತೆ ವ್ಯಾಪಕವಾದ ತನಿಖೆ ಮಾಡಬೇಕು. ದೇಶದಲ್ಲಿ ಅಕ್ರಮವಾಗಿ ಬಂದು ನೆಲೆಸಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಕರನ್ನ ಪತ್ತೆ ಮಾಡಲು ಸಮಗ್ರ ತನಿಖೆ ಮಾಡಬೇಕಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದರು.

ಪಾಕಿಸ್ತಾನಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ. ಗೂಢಚಾರರು, ಭಯೋತ್ಪಾದಕರು ಈ ರೀತಿಯಾಗಿ ಬರಬಹುದು

 ಆರ್ಥಿಕವಾಗಿ ಭಾರತವನ್ನ ದುರ್ಬಳಕೆ ಮಾಡುವ ಸಂಚು ಇರಬಹುದು. ದೇಶದ ಆಂತರಿಕ & ಬಾಹ್ಯ ಸುರಕ್ಷತೆ ದೃಷ್ಟಿಯಿಂದ NRC ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹ ಮಾಡಿದರು.

ಮಲೆನಾಡಿನ ಕಾಫಿ ತೋಟಗಳಲ್ಲಿ ಬಾಂಗ್ಲಾದೇಶ ನಿವಾಸಿಗಳು ಬರ್ತಿದ್ದಾರೆ ಎನ್ನೋ ಮಾತಿದೆ. ಕಾರ್ಮಿಕ ಕೆಲಸಕ್ಕಾಗಿ ಬರುವಂತವರಿಗೆ ವರ್ಕಿಂಗ್ ವೀಸಾ ನೀಡಿ, ಅವರ ಮೇಲೆ ನಿಗಾ ಇಡಲು ಅವಕಾಶ ಆಗುತ್ತದೆ ಎಂದು ಸಿಟಿ ರವಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ವಕ್ಫ್ ಬೋರ್ಡ್ ಆಸ್ತಿ ವಿಚಾರಕ್ಕೆ ಸಿಟಿ ರವಿ- ದೇಶದ ಪೂರ್ತಿ ಆಸ್ತಿಯೂ ಕೂಡಾ ಮೂಲ ನಮ್ಮ ಹಿಂದೂ ಪೂರ್ವಿಕರದ್ದು. ಜಮೀರ್ ಅವರ ಪೂರ್ವಿಕರ ಆಸ್ತಿಯಲ್ಲ.

ಸರ್ಕಾರದ ಆಸ್ತಿ. ಆದರೆ ಜಮೀರ್ ವಕ್ಫ್ ಆಸ್ತಿ ನಮ್ಮದು, ಇದು ಸರ್ಕಾರದ್ದು ಅಲ್ಲ ಎನ್ನುವ ದುರಂಕಾರದ ಮಾತುಗಳನ್ನಾಡಿದ್ದಾರೆ. ಶಾಸಕ ಜಮೀರ್ ಅವರು ದುರಂಕಾರ ಪರಮಾವಧಿ ಮೀರಿದ್ದಾರೆ. ಸಚಿವ ಜಮೀರ್ ಅವರ ವಕ್ಫ್ ಆಸ್ತಿಯನ್ನ ಯತ್ನಾಳ್ ಅಪ್ಪನ ಆಸ್ತಿಯಲ್ಲ ಎಂದಿದ್ದಾರೆ.

ಇದು ಜಮೀರ್ ಅವರ ಈ ನಡೆ ದುರಂಕಾರದ ಪರಮಾವಧಿ. ದಾನ, ಗ್ರ್ಯಾಂಟ್, ಕೊಂಡುಕೊಳ್ಳುವುದು ಜಮೀರ್ ಅವರ ಅಪ್ಪಂದಿರ ಆಸ್ತಿಯಲ್ಲ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿರುವ ಜಮೀರ್ ಅರ್ಥ ಮಾಡಿಕೊಳ್ಳಬೇಕು ಎಂದು ಸಿಟಿ ರವಿ ತಾಕೀತು ಮಾಡಿದರು.

ಸಿಎಂ ಮೇಲೆ ಭ್ರಷ್ಟಾಚಾರ ಆರೋಪ ಬಂದ ಬಳಿಕ ಲಂಗು ಲಗಾಮು ಇಲ್ಲವಾಗಿದೆ. ಲಂಚವಿಲ್ಲದೆ ಸರ್ಕಾರದಲ್ಲಿ ಒಂದು ಸಣ್ಣ ಕೆಲಸ ಕೂಡಾ ಆಗಲ್ಲ.

ಹುಚ್ಚರ ಮದುವೇಲಿ ಉಂಡವನೇ ಜಾಣ ಎನ್ನುವಂತಿದೆ. ಸಿದ್ದರಾಮಯ್ಯ ಅವರ ದಮ್ಮು, ಹಮ್ಮು ಬಿಮ್ಮು ಎರಡು ಕೂಡಾ ಹೋಗಿದೆ. ಸಂದರ್ಭದ ಲಾಭ ಪಡೆಯುವ ಹವಣಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅವರ ನಾಯಕರೇ ಅಂತ್ಯ ಆಡಲು ರೆಡಿ ಇದ್ದಾರೆ. ಆ ಹಿನ್ನೆಲೆ ಬ್ರೇಕ್ ಫಾಸ್ಟ್, ಡಿನ್ನರ್, ಲಂಚ್ ಮೀಟಿಂಗ್ ಬರ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಗೆದ್ದಾಗ ಜನಾದೇಶ ಎನ್ನುವುದು, ಕಾಂಗ್ರೆಸ್ ಸೋತರೆ ಇವಿಎಂ ದೋಷ ಎಂದು ಗೂಬೆ ಕೂರಿಸುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿನ ಇಡಿ, ಸಿಬಿಐ, ಐಟಿ ಇಲಾಖೆಗಳ ಮೇಲೂ ಅಪನಂಬಿಕೆ ವ್ಯಕ್ತ ಪಡಿಸಲಾಗುತ್ತಿದೆ. ಇಡಿ, ಸಿಬಿಐ, ಐಟಿ ಇಲಾಖೆಗಳನ್ನು ಬಿಜೆಪಿ ರಚನೆ ಮಾಡಿದ್ದಲ್ಲ. ಅದೇ ರೀತಿ ನ್ಯಾಯಾಲಯಗಳ ತೀರ್ಪಿನ ಮೇಲೂ ಕಾಂಗ್ರೆಸ್ ಅಪನಂಬಿಕೆ ಮಾಡುವುದನ್ನು ಬಿಡಲಿ ಎಂದು ಸಿಟಿ ರವಿ ಅವರು ತಾಕೀತು ಮಾಡಿದರು.

ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪತ್, ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಭಾರ್ಗವಿ ದ್ರಾವಿಡ್, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಸುದ್ದಿಗೋಷ್ಠಿಯಲ್ಲಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";