ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭೀಮಾ, ಕೃಷ್ಣಾ ನದಿ ಅಬ್ಬರಕ್ಕೆ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ವೈಮಾನಿಕ ಸಮೀಕ್ಷೆಯಲ್ಲಿ ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಹಾನಿಗೊಳಗಾದ ಪ್ರದೇಶಗಳನ್ನ ಮುಖ್ಯಮಂತ್ರಿಗಳು ವೀಕ್ಷಣೆ ಮಾಡಿದ್ದಾರೆ.

- Advertisement - 

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಖೇಡಗಿ ಗ್ರಾಮವು ಪ್ರವಾಹದಿಂದಾಗಿ 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಆಂಜನೇಯ ಸ್ವಾಮಿ ದೇಗುಲ, ಲಾಲ್​ಸಾಬ್ ದರ್ಗಾ, ಬಸವಣ್ಣ ದೇವಸ್ಥಾನಗಳು ಜಲಾವೃತವಾಗಿವೆ. ಜನರು ತೆಪ್ಪದಲ್ಲೇ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಭೀಮಾನದಿ ಆರ್ಭಟಕ್ಕೆ ಭೀಕರ ಪ್ರವಾಹ ಉಂಟಾಗಿದ್ದು, ಇಡೀ ಬಸವೇಶ್ವರ ಮಠ ಜಲಾವೃತವಾಗಿದೆ. ಕುತ್ತಿಗೆವರೆಗೂ ನೀರು ಬಂದರೂ ಕಾಂತಯ್ಯ ಎಂಬುವವರು ಈಜಿಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ. ಪ್ರವಾಹ ಇದ್ದರೂ ಮಠದಲ್ಲಿ ಪೂಜೆ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರದ ರೋಜಾ ಗ್ರಾಮ ಪ್ರವಾಹದಿಂದ ನಡುಗಡ್ಡೆಯಾಗಿದ್ದು ಮೂಕ ಪ್ರಾಣಿಗಳ ರೋದನೆ ಹೇಳತೀರದಾಗಿದೆ. ಜಾನುವಾರಗಳಿಗೆ ತಿನ್ನಲು ಮೇವು ಇಲ್ಲದೆ ಜನ ಪರದಾಡುತ್ತಿದ್ದು ಬೋಟ್​ನಲ್ಲಿ ಮೇವು ತರುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಗೆ ರಾಯಚೂರಿನಲ್ಲೂ ಅವಾಂತರ ಸೃಷ್ಟಿಯಾಗಿದೆ.
ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಹತ್ತಿ ಬೆಳೆ ನಾಶವಾಗಿದೆ. ಎಕರೆಗೆ
30 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿರುವ ರೈತರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

- Advertisement - 

ಬೆಳಗಾವಿಯಲ್ಲಿ ಘಟಪ್ರಭಾ ಅಬ್ಬರಕ್ಕೆ ಸಂಕಷ್ಟಗಳ ಪ್ರವಾಹ ಉಂಟಾಗಿದೆ. ಹುಕ್ಕೇರಿ ತಾಲೂಕಿನ ಜಿನ್ರಾಳದಲ್ಲಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಕಬ್ಬು ಬೆಳೆಗಳು ಸರ್ವನಾಶವಾಗಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಗೆ ಬಿಜೆಪಿ ವ್ಯಂಗ್ಯವಾಡಿದೆ. ವಿಪಕ್ಷ ನಾಯಕ ಆರ್. ಅಶೋಕ್, ನೀವು ಜನ ಘೇರಾವ್ ಆಗುತ್ತಾರೆಂಬ ಭೀತಿಯಿಂದ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಖ್ಯಮಂತ್ರಿಗಳು ಬೆಳೆ ಹಾನಿಗೆ ಪರಿಹಾರ ಘೋಷಿಸಿ ಸಮೀಕ್ಷೆಗೆ ಬರಬೇಕಿತ್ತು ಎಂದು  ಸರ್ಕಾರದ ವಿರುದ್ಧ ಕಿಡಿಕಾರಿ ಇದೊಂದು ಮುಟ್ಟಾಳರ ಸರ್ಕಾರ ಎಂದು ವಾಗ್ದಾಳಿ ಮಾಡಿದ್ದಾರೆ.
ವಿಜಯೇಂದ್ರರ ಮಾತಿಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಗರಂ ಆಗಿ
, ಅವರೇ ಮುಟ್ಟಾಳರು ನಮಗೇನು ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ವಿಜಯೇಂದ್ರರ ಮಾತಿಗೆ ತಿರುಗೇಟು ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ನಿಮ್ಮ ಪೂಜ್ಯ ತಂದೆ ವಿಮಾನ ನಿಲ್ದಾಣದಿಂದ ಹೊರಗೆ ಬಂದಿರಲಿಲ್ಲ ಎಂದು ಕಾಲೆಳೆದಿದ್ದಾರೆ.

ಇದಲ್ಲದೆ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರದ ಜವಾಬ್ದಾರಿ ಹೆಚ್ಚಿದೆ ಎಂದಿದ್ದು ಕಾಂಗ್ರೆಸ್ ನಾಯಕರ ಮಾತುಗಳಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕೌಂಟರ್ ಕೊಟ್ಟು ಕೇಂದ್ರಕ್ಕೆ ಯಾರಾದರೂ ಮನವಿ ಸಲ್ಲಿಸಿದ್ದೀರಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

 

 

Share This Article
error: Content is protected !!
";