ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಬೇಕು, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೇ ಯೋಜನೆಗಳ ಭೂ ಸ್ವಾಧೀನ ಕುರಿತು ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
2023-24ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ 25 ಕೋಟಿ ರೂ.ಗಳಂತೆ ಒಟ್ಟು 3,510 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಈಗಾಗಲೇ 2,040 ರೂ. ಕೋಟಿ ಮೊತ್ತದಲ್ಲಿ ಶೇ.58ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, 920 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ರಸ್ತೆ ದುರಸ್ತಿಗೆ 1,890 ಕೋಟಿ ಅನುಮೋದನೆ:
ಬೆಳಗಾವಿ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ರಸ್ತೆ ದುರಸ್ತಿಗಾಗಿ 1,205 ಕೋಟಿ ರೂ. ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ. ಅನುಷ್ಠಾನ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು.
2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ 1,890 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, 250 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ 8,666.50 ಕೋಟಿ ರೂ. ಅನುಮೋದನೆ ನೀಡಲಾಗಿದ್ದು, ಈಗಾಗಲೇ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜ.10ರೊಳಗೆ ಟೆಂಡರ್‌ಪ್ರಕ್ರಿಯೆ ಪೂರ್ಣಗೊಳಿಸಿ:
ಕಾಮಗಾರಿಗಳನ್ನು ನಿಗದಿತ ಅವಧಿ ಒಳಗಾಗಿ ಪೂರ್ಣಗೊಳಿಸಿ, ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿ. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಬೇಕು.
2024-25ನೇ ಸಾಲಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಒಟ್ಟು 8,666.50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನೂ ಬಾಕಿಯಿರುವ 19 ಕ್ಷೇತ್ರಗಳಿಂದ ಪ್ರಸ್ತಾವನೆಗಳನ್ನು ಪಡೆದ ಬಳಿಕ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಟೆಂಡರ್‌ಪ್ರಕ್ರಿಯೆಗಳನ್ನು ಜನವರಿ 10ರೊಳಗೆ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ರೈಲ್ವೆ ಕಾಮಗಾರಿಗಳಿಗೆ ಬಾಕಿಯಿರುವ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕುಡಚಿ-ಬಾಗಲಕೋಟೆ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಕೈಗೊಳ್ಳಲು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

