ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಪ್ರಕರಣದ A1 ಆರೋಪಿ ಸಿದ್ದರಾಮಯ್ಯ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದು ಕೇವಲ ನಾಮಕಾವಸ್ತೆ !
ಲೋಕಾಯುಕ್ತ ಅಧಿಕಾರಿಗಳು ಎ1 ಆರೋಪಿಯಾಗಿರುವ ಸಿದ್ದರಾಮಯ್ಯಗೆ ಸೆಲ್ಯೂಟ್‌ಹೊಡೆದು ಸ್ವಾಗತ ಕೋರಿದ್ದಾರೆಂದರೆ, ಇನ್ನೆಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆದಿರುತ್ತದೆ? ಊಹಿಸಿಕೊಳ್ಳಿ ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಗಂಭೀರ ಆರೋಪ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಲೋಕಾಯುಕ್ತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಪ ಅವಧಿಯಲ್ಲಿ ನೆಪಮಾತ್ರಕ್ಕೆ ವಿಚಾರಣೆ ಮುಗಿಸಿದ್ದಾರೆ. ನನ್ನನ್ನು ಮತ್ತೆ ವಿಚಾರಣೆಗೆ ಕರೆದಿಲ್ಲ ಎಂದು ಸ್ವತಃ ಸಿಎಂ ಮಾಧ್ಯಮಗಳಿಗೆ ಹೇಳಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಲೋಕಾಯುಕ್ತ ಅಧಿಕಾರಿಗಳು A2, A3, A4 ಆರೋಪಿಗಳನ್ನು ಎರಡು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಅಲ್ಲದೇ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲು ಗಂಟೆಗಟ್ಟಲೇ ಸಮಯಬೇಕಾಗುತ್ತದೆ.
ಆದರೆ ಸಿದ್ದರಾಮಯ್ಯ ಅವರ ಇಂದಿನ ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ಪೂರ್ವ ನಿರ್ಧರಿತ ವೇಳಾಪಟ್ಟಿಗೆ ಅನುಕೂಲವಾಗುವಂತೆ ಒಂದೂವರೆ ಗಂಟೆಯಲ್ಲಿ ವಿಚಾರಣೆ ಮಾಡಿ ಮುಗಿಸಿರುವುದು, ಇದು ಕಾಟಾಚಾರದ ವಿಚಾರಣೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿನೀಡಿದೆ.
A1 ಆರೋಪಿಯಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ತನಕ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ ಎಂದು ಜೆಡಿಎಸ್ ಅಭಿಪ್ರಾಯ ಪಟ್ಟಿದೆ.