ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್ ಬಿಡುವ ಮುನ್ನ ಸಿದ್ದರಾಮಯ್ಯ ಶುರು ಮಾಡಿಕೊಂಡಿದ್ದಾರೆ!! ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಹಾಸನದಲ್ಲಿ ಡಿಸೆಂಬರ್ 5ನೇ ತಾರೀಖು ನಡೆಯುತ್ತಿರುವ ಕಾಂಗ್ರೆಸ್ಸಿನ ಅಡ್ರೆಸ್ಸೆ ಇಲ್ಲದ ಅಹಿಂದಾ ಸಮಾವೇಶ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವಾ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಮನೆಯೊಂದು ಮೂವತ್ತೊಂದು ಬಾಗಿಲು ಎನ್ನುವಂತೆ ಆಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಾಹೇಬರಿಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್‌ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು?
ರಾಜ್ಯದಲ್ಲಿ ಈ ಸರ್ಕಾರ ಬಂದಾಗಿನಿಂದಲೂ ಅನೇಕ ಹಗರಣಗಳಿಂದ ದೇಶವ್ಯಾಪಿ ಕಾಂಗ್ರೆಸ್ ಮುಜುಗರಕ್ಕೀಡಾಗುತ್ತಲೇ ಇದೆ. ಆ ಮುಜುಗರದಲ್ಲಿ ಸಿದ್ದು ಸರ್ಕಾರದ್ದು ಸಿಂಹಪಾಲು ಎಂದು ಜೆಡಿಎಸ್ ಟೀಕಿಸಿದೆ.
ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಮೀಸಲು ಹಣ ಲೂಟಿ, ಅಬಕಾರಿ ಹಗರಣ ಸೇರಿ ಲಂಚಾವತಾರದಲ್ಲಿ ದಾಖಲೆ ಬರೆದಿರುವ ಸರ್ಕಾರದಲ್ಲಿ, ದಿನಕ್ಕೊಂದರ ಲೆಕ್ಕದಲ್ಲಿ ಹೊರ ಬರುತ್ತಿರುವ ಹಗರಣಗಳು ಕೈ ಕಮಾಂಡ್ ನಾಯಕರನ್ನೂ ಹೈರಾಣ ಮಾಡಿವೆ. ಹಸ್ತಿನಾವತಿಯಲ್ಲೂ ಇವರ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ.
50:50 ಅನುಪಾತದ ಲೆಕ್ಕದಲ್ಲಿ ನಡೆದ ಅಧಿಕಾರ ಸೂತ್ರ ಬಿಗಡಾಯಿಸಿದ್ದು, ಕುರ್ಚಿ ಆಕಾಂಕ್ಷಿಗಳು ದೆಹಲಿಯಾತ್ರೆ ಜೊತೆಗೆ ಗುಪ್ತ್ ಗುಪ್ತ್ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.