ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿಗಳ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸಿ ಎಂದು ಯಾರು ಕೇಳುತ್ತಿಲ್ಲ. ಹೈಕಮಾಂಡ್ ನೇರವಾಗಿ ಹೇಳದೇ ಇರಬಹುದು, ಆದರೆ ಸದ್ಯಕ್ಕೆ ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟವಾಗಿ ಸಿಗ್ನಲ್ ಕೊಟ್ಟಿದೆ. ಆದ್ದರಿಂದ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಅಂತಾ ನಾನು ನಂಬುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಪುನರುಚ್ಚರಿಸಿದರು.
ಹೈಕಮಾಂಡಗ್ ಮನ್ನಣೆ ಕೊಟ್ಟಿಲ್ಲ:
ಮುಖ್ಯಮಂತ್ರಿಗಳ ಬದಲಾವಣೆ ಕುರಿತು ರಾಜಕೀಯ ವಲಯದಲ್ಲಿ ಯಾವುದೇ ಚರ್ಚೆ ಆಗುತ್ತಿಲ್ಲ. ಕೇವಲ ಮಾಧ್ಯಮದಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಸಿಎಂ ಬದಲಾವಣೆ ವಿಷಯ ಈಗಾಗಲೇ ಸೆಟಲ್ ಆಗಿದೆ. ಸಿಎಂ ಅವರನ್ನು ಕೆಳಗೆ ಇಳಿಸಿ ಎಂದು ಯಾರೂ ಹೇಳಿಲ್ಲ. ಜೊತೆಗೆ ಕೆಲವರ ಬೇಡಿಕೆಗೂ ಹೈಕಮಾಂಡ್ ಕೂಡ ಯಾವುದೇ ಮನ್ನಣೆ ಕೊಟ್ಟಿಲ್ಲ ಎಂದು ಯತೀಂದ್ರ ಪ್ರತಿಕ್ರಿಯೆ ನೀಡಿದರು.
ತಾಯಿಯ ಸಂತೋಷ:
ಮುಡಾ ಹಗರಣದಲ್ಲಿ ಕೋರ್ಟ್ ಬಿ ರಿಪೋರ್ಟ್ ಪುರಸ್ಕಾರ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಂತೀಂದ್ರ ಸಿದ್ದರಾಮಯ್ಯ, ನಮಗೆ ಕಾನೂನಿನಲ್ಲಿ ನಂಬಿಕೆ ಇತ್ತು, ನಾವೇನು ತಪ್ಪು ಮಾಡಿರಲಿಲ್ಲ. ಕೋರ್ಟ್ ತೀರ್ಪನ್ನು ಸ್ವಾಗತ ಮಾಡುತ್ತೇವೆ. ಕೋರ್ಟ್ ತೀರ್ಪಿನಿಂದ ನಮ್ಮ ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ. ದೂರುದಾರ ಸ್ನೇಹಮಹಿ ಕೃಷ್ಣ ಅವರು ಹೋರಾಟ ಮಾಡಲಿ. ಕಾನೂನು ಎಲ್ಲರಿಗೂ ಒಂದೇ ಎಂದು ಡಾ.ಯತೀಂದ್ರ ತಿಳಿಸಿದರು.
ಮೂಗು ತೂರಿಸುತ್ತಿಲ್ಲ:
ಇಂಧನ ಸಚಿವ ಜಾರ್ಜ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಮೂಗು ತೂರಿಸುತ್ತಿಲ್ಲ, ಆದರೂ ಮೂಗು ತೂರಿಸುತ್ತಿದ್ದಾರೆನ್ನುವ ಆರೋಪ ವಿಚಾರ ನನಗೆ ಗೊತ್ತಿಲ್ಲ, ಖುದ್ದು ಸಚಿವ ಜಾರ್ಜ್ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ನನ್ನ ಹೆಸರನ್ನು ಬಿಜೆಪಿಯವರು ಸುಮ್ಮನೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಸದನದಲ್ಲಿ ಕೂಡ ಬಿಜೆಪಿ ನನ್ನ ಹೆಸರನ್ನ ಹೇಳಿದೆ. ಸದಾ ನನ್ನನ್ನ ಬಿಜೆಪಿಯವರು ಟಾರ್ಗೆಟ್ ಮಾಡಿದ್ದಾರೆ ಎಂದು ಯತೀಂದ್ರ ದೂರಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮನರೇಗಾ ವಿಚಾರದಲ್ಲಿ ಜಟಾಪಟಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ನಾವು ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಸಾಗುತ್ತಿದ್ದೇವೆ. ಆದರೆ ಬಿಜೆಪಿ ಅವರಿಗೆ ಜನರ ಕೆಲಸ ಬೇಕಿಲ್ಲ, ಗಾಂಧೀಜಿ ಅವರ ಹೆಸರು ಬೇಕಿಲ್ಲ, ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಬ್ಯಾಲೆಟ್ ಪೇಪರ್ ಬಳಕೆಗೆ ಸ್ವಾಗತ:
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿದ್ದು ನಾನು ಕೂಡ ಸ್ವಾಗತಿಸುತ್ತೇನೆ. ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಇವಿಎಂ ಮಿಷನ್ ರದ್ದು ಮಾಡಿ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳೇ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂದು ಯತೀಂದ್ರ ಅಭಿಪ್ರಾಯಪಟ್ಟರು.

