ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟಿಸಿದ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ಗಾಂಧಿ ನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಉದ್ಘಾಟಿಸಿದರು.

ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ. ಒಟ್ಟು 2,618 ಚದರ ಮೀಟರ್ ಅಳತೆಯ ನಿವೇಶನದಲ್ಲಿ ತಲೆಯೆತ್ತಿರುವ ಈ ಕಟ್ಟಡವು ಎರಡು ನೆಲ ಅಂತಸ್ತುಗಳು, ನೆಲ ಅಂತಸ್ತು, ಐದು ಮಹಡಿಗಳು ಹಾಗೂ ತಾರಸಿ ಮಹಡಿ ಒಳಗೊಂಡಿದೆ. ಲೋಯರ್ ಬೇಸ್ ಮೆಂಟ್ ನಲ್ಲಿ 58 ಕಾರುಗಳು ಹಾಗೂ ಅಪ್ಪರ್ ಬೇಸ್ ಮೆಂಟ್ ನಲ್ಲಿ 38 ಕಾರುಗಳ ನಿಲುಗಡೆಗೆ ಜಾಗ ಕಲ್ಪಿಸಲಾಗಿದೆ.

- Advertisement - 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಈ ಸಂದರ್ಭದಲ್ಲಿ ಇದ್ದರು. ಇದೇ ವೇಳೆ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೆ.ಐ.ಎ.ಡಿ.ಬಿ.ಯ 2 ಕೋಟಿ ಲಾಭಾಂಶವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಿದರು.

ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಈ ಕಟ್ಟಡ ಕಟ್ಟಲು ಶಾಸಕ ಆರ್.ವಿ.ದೇಶಪಾಂಡೆ ಅವರು ತೀರ್ಮಾನ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನೂ ಸನ್ಮಾನಿಸಲಾಯಿತು.

- Advertisement - 

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

 

 

 

Share This Article
error: Content is protected !!
";