ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಶ್ಚಿತ, ನವೆಂಬರ್-ಡಿಸೆಂಬರ್ ತಿಂಗಳೊಳಗೆ ರಾಜಕೀಯ ಕ್ರಾಂತಿ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದ್ದಾರೆ.
ಬೆಳೆ ಹಾನಿ ಸಮೀಕ್ಷೆಗೆ ಭೇಟಿ ನೀಡುವ ಮುನ್ನ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ಈಗ ಜಗಳ ಆರಂಭವಾಗಿದೆ. ಈಗಾಗಲೇ ಕ್ರಾಂತಿ ಅಂತ ಹೇಳಿರುವ ಸಚಿವ ರಾಜಣ್ಣ ಮನೆಗೆ ಹೋಗಿದ್ದಾರೆ.ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿ.ಕೆ.ಶಿವಕುಮಾರ್ ಹಠ ಬಿಡುತ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ದರಿದ್ದೇವೆಎಂದು ಅಶೋಕ್ ತಿಳಿಸಿದರು.
ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆಂದು ಹೇಳುತ್ತಿದ್ದಾರೆ. ಯಾವಾಗ ಇಳೀತೀರಾ ಎಂದು ಅಲ್ಲಿನ ನಾಯಕರು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯಗೆ ಜಾತಿ ಸಮೀಕ್ಷೆ ಮಾತ್ರ ಮುಖ್ಯ. ಜಾತಿಗಳ ಮಧ್ಯೆ ಬೆಂಕಿ ಹಚ್ಚುವುದೇ ಸಿದ್ದರಾಮಯ್ಯನವರ ಕಾಯಕ. ಸಿದ್ದರಾಮಯ್ಯ ಬೆಂಕಿ ಹಚ್ಚುವ ಮುಖ್ಯಮಂತ್ರಿ. ಬೆಳೆ ಹಾನಿಯಿಂದ ದಸರಾ ಹಬ್ಬದ ಮನೆಯಲ್ಲಿ ಆಚರಣೆ ಮಾಡಲು ಆಗದೇ ಬೀದಿಯಲ್ಲಿ ಸಂತ್ರಸ್ತರು ನಿಂತಿದ್ದಾರೆ. ಆದರೂರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಇದು ದುಷ್ಟ ಸರ್ಕಾರ ಎಂದು ಟೀಕಿಸಿದ ಆರ್.ಅಶೋಕ್, ಕೇಂದ್ರ ಸರ್ಕಾರ ನೆರವಿಗೆ ಬರಬೇಕೆನ್ನುವ ಡೈಲಾಗ್ ಅನ್ನು ಸಿಎಂ ಹೊಡೆಯುತ್ತಿದ್ದಾರೆ. ಸಿಎಂ ಆದಾಗಿನಿಂದಲೂ ಇದೇ ಡೈಲಾಗ್ ಹೊಡೆಯುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಇದೇ ಡೈಲಾಗ್ ಹೊಡೆದಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಕೇಂದ್ರಕ್ಕೆ ಮಳೆಯಿಂದ ಎಷ್ಟು ಹಾನಿಯಾಗಿದೆ ಎಂಬ ವರದಿ ಕಳುಹಿಸಬೇಕು. ಕೇಂದ್ರ ಗೃಹ ಸಚಿವರು, ಕೃಷಿ ಸಚಿವರನ್ನು ರಾಜ್ಯದ ನಾಯಕರು ಈವರೆಗೆ ಭೇಟಿ ಮಾಡಿಲ್ಲ. ಸಿಎಂ ಮತ್ತು ಸಚಿವರು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದು, ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬ ಬಗ್ಗೆ ಸಿಎಂ ಬಾಯಿಯಿಂದ ಉತ್ತರ ಬಂದಿಲ್ಲಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ 80 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರ ಸಂಘ ಹೇಳಿದೆ. ಲೂಟಿ ಮಾಡಲು ಎಲ್ಲ ಸಚಿವರು ಕಾದು ನೋಡುತ್ತಿದ್ದಾರೆ. ಇದೊಂದು ತುಘಲಕ್ ಸರ್ಕಾರ. ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದ ರಸ್ತೆ ತೋರಿಸಿದರೆ ಬಹುಮಾನ ಕೊಡಬಹುದು ಎಂದು ಅಶೋಕ್ ವ್ಯಂಗ್ಯವಾಡಿದರು.

