ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ. ಸಿದ್ದರಾಮಯ್ಯನವರ ನಿದ್ದೆ ಸರ್ಕಾರದಲ್ಲಿ ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ವಜಾ ಮಾಡದಿದ್ದರೆ, ಸಿಎಂಗೆ 85% ಕಮಿಷನ್ ಹೋಗುತ್ತಿದೆ ಅಂತರ್ಥ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಅಬಕಾರಿ ಇಲಾಖೆಗೆ ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಟಾರ್ಗೆಟ್ ಕೊಡುತ್ತಿದ್ದರು. ಅದರ ಪರಿಣಾಮ ಸನ್ನದುಗಳು ಅಬಕಾರಿ ಇಲಾಖೆಯಲ್ಲಿ ಹರಾಜು ಆಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ದೊಡ್ಡ ತಿಮಿಂಗಿಲ ಬಂಧಿಸಿದ್ದಾರೆ.
ಒಂದೇ ಒಂದು ಸನ್ನದಿಗೆ 2.30 ಕೋಟಿ ರೂ. ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯಡಿ ಬರುತ್ತದೆ. ಅಬಕಾರಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಿದ್ದರಾಮಯ್ಯ ನೇರ ಕಾರಣ ಎಂದು ಆರೋಪಿಸಿದರು.
ನಕಲಿ ಗಾಂಧಿಗಳು ಇವರು, ಗಾಂಧಿ ಹೆಸರು ಹೇಳಲು ನೈತಿಕತೆ ಇಲ್ಲ. ಗಾಂಧಿಯವರ ಬಗ್ಗೆ ಮಾತಾಡ್ತಾರೆ? ಎಲ್ಲಿದೆ ಆದರ್ಶ? ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಿದ್ದಾರೆ. ಕಳ್ಳ ಕಾಂಗ್ರೆಸಿಗರು ಒಂದು ಕಡೆ ಕುಡಿಸೋದು, ಇನ್ನೊಂದು ಕಡೆ ವಸೂಲಿ. ಅಬಕಾರಿ ಮಂತ್ರಿ ತಿಮ್ಮಾಪುರ ಒಂದು ಕ್ಷಣವೂಅಧಿಕಾರದಲ್ಲಿ ಇರಬಾರದು, ರಾಜೀನಾಮೆ ಕೊಡಬೇಕು. ಇಲ್ಲವೆಂದರೆ ಮಂತ್ರಿಗಳನ್ನು ಸಂಪುಟದಿಂದ ಸಿಎಂ ತೆಗೆಯಲಿ ಎಂದು ಅಶೋಕ್ ಒತ್ತಾಯಿಸಿದರು.
ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಎ1 ಖದೀಮ, ಸೂಪರಿಂಟೆಂಡೆಂಟ್ ತಮ್ಮಣ್ಣ ಮಿನಿ ಖದೀಮ, ಲಕ್ಕಪ್ಪ ಗಣಿ ಹೆಸರಲ್ಲೇ ಗಣಿ ಇದೆ. ಮೂವರೂ ಲೋಕಾ ಬಲೆಗೆ ಬಿದ್ದಿದ್ದಾರೆ. ಸಿಎಲ್-7 ಒಟ್ಟು 750 ಲೈಸೆನ್ಸ್ ಕೊಡುತ್ತಿದ್ದಾರೆ. ಪ್ರತಿ ಸಿಎಲ್7ಗೆ 1.5 ಕೋಟಿ ರೂ. ಲಂಚ, 650 ಸಿಎಲ್-2 ಸನ್ನದುಗಳು 1.5 ಕೋಟಿ ರೂ.ಗೆ ಹರಾಜು, ಒಟ್ಟು 950 ಕೋಟಿ ಲಂಚ, 1 ಕೋಟಿಗೆ ಸಿಎಲ್-9 ಕೊಡುತ್ತಿದ್ದಾರೆ, ಒಟ್ಟು 92 ಕೋಟಿ, ಮೈಕ್ರೋಬ್ರೆವರಿಗಳಿಗೆ ಅತೀ ಹೆಚ್ಚು ಲಂಚ ಕೊಡಬೇಕು. 1 ಮೈಕ್ರೋಬ್ರೆವರಿಗೆ 2.5 ಕೋಟಿ ರೂ., ಅಂತಹ 550 ಮೈಕ್ರೋಬ್ರೆವರಿಗಳಿವೆ” ಎಂದರು.
ಜಗದೀಶ್ ನಾಯ್ಕ್ ಆಡಿಯೋ ವೈರಲ್:
ಮಂತ್ರಿಗೇ ಲಂಚ ಕೊಡಬೇಕು ಎಂಬ ಆಡಿಯೋ ಇದೆ. ಕಾಂಗ್ರೆಸ್ನವರು ಇಷ್ಟು ದಿನ ಸಾಕ್ಷಿ ಕೇಳುತ್ತಿದ್ದರು. ಮಂತ್ರಿಗೆ ಇಷ್ಟು ಮಂತ್ಲಿಮನಿ ಕೊಡಬೇಕು ಅಂತ ಆಡಿಯೋದಲ್ಲಿದೆ. ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಆಡಿಯೋ ಇದು ಎಂದು ಸುದ್ದಿಗೋಷ್ಟಿ ನಡುವೆ ಜಗದೀಶ್ ನಾಯ್ಕ್ರದ್ದು ಎನ್ನಲಾದ ಆಡಿಯೋವನ್ನು ಕೇಳಿಸಿದರು.
ನಾಲ್ಕು ಟೇಬಲ್ಗಳಿಗೆ ಅಬಕಾರಿ ಇಲಾಖೆಯಲ್ಲಿ ಹಣ ಹೋಗಬೇಕು. ಎಲ್ಲರಿಗೂ ಹಣ ಶೇರ್ ಮಾಡಬೇಕು, ಮಂತ್ರಿವರೆಗೂ ಹೋಗಬೇಕು. ಬೇಗ ಹಣ ಕೊಡಿ, ಸ್ಪಾಟ್ನಲ್ಲಿ ಲೈಸೆನ್ಸ್ ಸಿಗುತ್ತೆ ಅಂತ ಆಡಿಯೋದಲ್ಲಿದೆ. ಇದು ಗಾಂಧಿವಾದಿಗಳ ಸರ್ಕಾರವೇ ಎಂದು ಅಶೋಕ್ ಕಿಡಿಕಾರಿದರು.
ವಾಲ್ಮೀಕಿ ಹಗರಣದಲ್ಲಿ 180 ಕೋಟಿ ಲೂಟಿ ಮಾಡಿ ಬಳ್ಳಾರಿ ಚುನಾವಣೆ ಮಾಡಿದರು. ಅಬಕಾರಿ ಇಲಾಖೆಯಲ್ಲೂ ಲೂಟಿ ಮಾಡಿ ಮಹಾರಾಷ್ಟ್ರ, ಬಿಹಾರ ಚುನಾವಣೆಗಳಿಗೆ ಕಳಿಸಲಾಗಿದೆ.
ಮೋದಿಯವರೇ ಕರ್ನಾಟಕ ಮದ್ಯದ ಹಣ ಮಹಾರಾಷ್ಟ್ರ ಚುನಾವಣೆಗೆ ಹೋಗಿದೆ ಅಂತ ಆರೋಪ ಮಾಡಿದ್ದರು. ಇಷ್ಟುದಿನ ಡ್ರಗ್ ನಶೆ ಆಯ್ತು, ಈಗ ಎಣ್ಣೆ ನಶೆ. ಇದು ನಶೆಗಳ ಸರ್ಕಾರ. ಅಧಿಕಾರದ ನಶೆ, ಅಧಿಕಾರಕ್ಕಾಗಿ ದೆಹಲಿಗೆ ಹೋಗುತ್ತಾರೆ, ಈಗಲೂ ಡಿಕೆಶಿ ದೆಹಲಿಯಲ್ಲಿದ್ದಾರೆ. ಈ ಸರ್ಕಾರಕ್ಕೆ ಪ್ಯಾರಾಲಿಸಿಸ್ ಹೊಡೆದಿದೆ. ದುಡ್ಡೆಲ್ಲ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತಿದೆ. ಇದು 60% ಕಮಿಷನ್ ಪಡೆಯುವ ಸರ್ಕಾರ. ಇದು ಸಾಬೀತಾಗಿದೆ ಎಂದು ಆರೋಪಿಸಿದರು.
ಮೈಸೂರಲ್ಲೂ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಲಾಗಿದೆ. ಮೈಸೂರಿಂದ ಬಿಜೆಪಿ ನಾಯಕರು ಬನ್ನಿ ಅಂತ ನನಗೆ ಕರೆಯುತ್ತಿದ್ದಾರೆ. ಇಲ್ಲಿ ಕೋಗಿಲೆ ಕೂಗುತ್ತಿದೆ, ಕೋಗಿಲು ಲೇಔಟ್‌ನ ಅಕ್ರಮ ವಲಸಿಗರಿಗೆ ಮನೆ ಕೊಡುತ್ತಿದ್ದಾರೆ.
ಕಳೆದ ವಿಧಾನಸಭೆಯಲ್ಲಿ ಡ್ರಗ್ ಮಾಫಿಯಾ ಬಗ್ಗೆ ಮಾತಾಡಿದ್ದೆ. ಇದಕ್ಕೆ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ. ಅವರು ಗೊತ್ತಿಲ್ಲ ಸಚಿವರು. ರಾಜ್ಯದಲ್ಲಿ ಎಲ್ಲ ಸರಿ ಇದೆ ಅಂತ ಉತ್ತರ ನೀಡಿದ್ದಾರೆ. ಪೊಲೀಸ್ ಇಲಾಖೆ ಮೇಲೆಯೇ ನಿನ್ನೆ ಸಭೆಯಲ್ಲಿ ಕಿಡಿಕಾರಿದ್ದಾರೆ. ನಿದ್ದೆರಾಮಯ್ಯನವರು ಎದ್ದು ಪ್ರಗತಿ ಪರಿಶೀಲನೆ ಸಭೆ ಮಾಡಿದ್ದಾರೆ. ವೈಫಲ್ಯ ಬಿಡಿಸಿ ಹೇಳಿ ಸಿಎಂ ಪೊಲೀಸ್ ಇಲಾಖೆಯನ್ನು ಬೆತ್ತಲೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. ನೀವೇನು ಮಾಡುತ್ತಿದ್ದಿರಿ ಅಂತ ಕೇಳಿದ್ದಾರೆ. 80 ಜನ ಪೊಲೀಸ್ ಇಲಾಖೆಯಲ್ಲಿ ಕಳ್ಳರು ಇದ್ದಾರೆ ಅಂತ ಸಿಎಂ ಹೇಳಿದ್ದಾರೆ. 80 ಅಲ್ಲ 180 ಜನ ಕಳ್ಳರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಸಿಎಂ ಪೊಲೀಸರ ಜೊತೆ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅಪರಾಧಿ ತರ ಸಿಎಂನ ಫೋಟೋದಲ್ಲಿ ನಿಲ್ಲಿಸಿದ್ದಾರೆ. ಪೊಲೀಸ್ ಸ್ಟೇಷನ್‌ಗಳನ್ನು ಕಾಂಗ್ರೆಸ್ ಕಚೇರಿಗಳಾಗಿ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಹಣ ಕೊಟ್ಟರೆ ಆಯಕಟ್ಟಿನ ಜಾಗ ಸಿಗುತ್ತದೆ ಎಂದು ಆರೋಪ ಮಾಡಿದರು.
ರಾಜೀವ್ ಗೌಡ ಪತ್ತೆಗೆ ಐದು ತಂಡ ಮಾಡಿದ್ದಾರಂತೆ. ಆತ ಯಾವ ತಂಡಕ್ಕೂ ಸಿಗಲ್ಲ. ಕಾಂಗ್ರೆಸ್ ತಂಡಕ್ಕೆ ಮಾತ್ರ ಆತ ಸಿಗುತ್ತಾನೆ. ಕಾಂಗ್ರೆಸ್ ತಂಡವನ್ನೇ ಆತನ ಪತ್ತೆಗೆ ರಚಿಸಿ. ರಾಜೀವ್ ಗೌಡ ಅಂಥವರಿಂದ ಅಧಿಕಾರಿಗಳು ಭೀತಿಯಲ್ಲಿದ್ದಾರೆ. ಶಿಡ್ಲಘಟ್ಟ, ಮೈಸೂರು ಥರ ಬೇರೆ ಅಧಿಕಾರಿಗಳಿಗೆ ಧೈರ್ಯದಿಂದ ಉತ್ತರ ಕೊಡದ ವಾತಾವರಣ ಇದೆ. ನಿಯಂತ್ರಣ ಮಾಡಬೇಕಾದ ಸರ್ಕಾರವೇ ಕಂಟ್ರೋಲ್ ತಪ್ಪಿ ಮೆಂಟಲ್ ಆಗಿದೆ ಎಂದು ವ್ಯಂಗ್ಯವಾಡಿದರು.
ಬೀದಿಯಲ್ಲಿ ಹೋಗುವ ದಾಸಯ್ಯನ ಸಿಎಂ ಮಾಡಿದರೂ ಒಪ್ಪಿಕೊಳ್ಳುತ್ತೇವೆ ಅಂತ ಜಮೀರ್ ಹೇಳಿಕೆ ಕೊಟ್ಟಿದ್ದಾರೆ. ದಾಸಯ್ಯನನ್ನೇ ಕರೆತಂದು ಸಿಎಂ ಮಾಡಿದರೆ ಸಂವಿಧಾನ ಎಲ್ಲಿ ಹೋಯ್ತು? ದಾಸಯ್ಯನಿಗೂ ಬೆಲೆ ಇದೆ. ಆದರೆ 224 ಶಾಸಕರಿಗೆ ಬೆಲೆ ಇಲ್ವಾ? ಸಿಎಂ ಹುದ್ದೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ತಗೊಂಡು ಹೋಗಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ: ಇದೇ ವೇಳೆ ಮಾತನಾಡಿದ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಹೊಸ ಲೈಸೆನ್ಸ್‌ಗಳಿಗೆ ಹಣ ಪಡೆದುಕೊಂಡೇ ಕೊಡ್ತಾರೆ. ಲೈಸೆನ್ಸ್ ರಿನಿವಲ್‌ಗಳಿಗೆ ಬೇರೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ತಮ್ಮಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ತೋರಿಸಿ ಅಂದರು. ಸಿಎಂ ಕಪ್ಪು ಕಾಗೆಯೇ ಆಗಿಹೋಗಿದ್ದಾರೆ, ಕಪ್ಪು ಚುಕ್ಕೆ ಹೇಗೆ ತೋರಿಸಲು ಆಗುತ್ತದೆ. ಲೂಟಿ, ಭ್ರಷ್ಟಾಚಾರ ಪ್ರಕರಣಗಳು ದಿನಕ್ಕೊಂದು ಹೊರಗೆ ಬರುತ್ತಿದೆ ಎಂದು ಕಿಡಿಕಾರಿದರು.
ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಒಂದಕ್ಕೇ 1,714 ಕೋಟಿ ರೂ. ಟೆಂಡರ್ ಕೊಟ್ಟಿದ್ದಾರೆ. 15 ವರ್ಷದ ಟೆಂಡರ್ ಇದಾಗಿದೆ. ಇವರೆಷ್ಟು ವರ್ಷ ಅಧಿಕಾರದಲ್ಲಿ ಇರುತ್ತಾರೆ? ಒಂದೇ ಕಂಪನಿಗೆ ಟೆಂಡರ್ ಕೊಡುವ ಬದಲು ನಾಲ್ಕೈದು ಕಂಪೆನಿಗಳಿಗೆ ಕೊಡಬಹುದಿತ್ತು. ಕಸ ಹೊಡೆಯುವ ಯಂತ್ರಗಳಿಗೂ ಏಳು ವರ್ಷಕ್ಕೆ 614 ಕೋಟಿ ರೂ. ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿದರು.
ಅಬಕಾರಿ ಸಚಿವರನ್ನು ಸಿಎಂ ವಜಾ ಮಾಡಬೇಕು. ಇಲ್ಲದಿದ್ದರೆ ಇದು ಸಿಎಂ ಅವರೇ ಹೇಳಿ ಮಾಡಿಸಿದ ಭ್ರಷ್ಟಾಚಾರ. ಸಿಎಂ ತಿಮ್ಮಾಪುರರನ್ನು ವಜಾ ಮಾಡದಿದ್ದರೆ ಇದರಲ್ಲಿ ಸಿಎಂ ಪಾತ್ರವೂ ಇದೆ ಅಂತರ್ಥ. ಇದರ ವಿರುದ್ಧ ನಾವು ಹೋರಾಟ ಹಾಗೂ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

