ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಸಿಎಂಗೆ ಪ್ರಾಮಾಣಿಕತೆ ಇಲ್ಲ. ಹಿಂದುಳಿದ ಮತ್ತು ಶೋಷಿತ ವರ್ಗದವರಿಗೆ ನ್ಯಾಯ ಸಿಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಮುದಾಯದವರಿಗೂ ಜಾತಿ ಗಣತಿ ವಿಚಾರದಲ್ಲಿ ನ್ಯಾಯ ಸಿಗಬೇಕೆಂಬ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಕುರ್ಚಿ ಬಗ್ಗೆ ಯಾವಾಗ ಅಭದ್ರತೆ ಕಾಡುತ್ತದೋ ಆಗ ಈ ಜಾತಿ ಗಣತಿ ವಿಚಾರ ಕೈಗೆತ್ತಿಕೊಳ್ಳುತ್ತಾರೆ ಎಂದು ದೂರಿದರು.
ಜಾತಿ ಗಣತಿ ಸಂಬಂಧ ಎರಡು ಬಾರಿ ಸಚಿವ ಸಂಪುಟ ಸಭೆ ನಡೆಸಿದರು. ಸಚಿವ ಸತೀಶ್ ಜಾರಕಿಹೊಳಿ ಜಾತಿ ಗಣತಿ ವರದಿ ಬಗ್ಗೆ ತೀರ್ಮಾನಿಸಲು ಇನ್ನೂ ಒಂದು ವರ್ಷವಾಗಬಹುದು ಎಂದು ಹೇಳಿದ್ದಾರೆ. ಜಾತಿ ಜನಗಣತಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿರುವ ಸಿದ್ದರಾಮಯ್ಯನವರು, ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು.
ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಮಾತನಾಡಿ, ಜಾತಿ ಗಣತಿ ಸಿದ್ಧಪಡಿಸಿದ ಕಾಂತರಾಜ್ ಅವರೇ ವರದಿಗೆ ಸಹಿ ಮಾಡಿಲ್ಲ. ಮೂಲ ಜಾತಿ ಗಣತಿ ವರದಿ ನಾಪತ್ತೆಯಾಗಿದೆ. ಇದು ಜನರಿಗೆ ಮೋಸ ಮಾಡಲು ಸಿದ್ದರಾಮಯ್ಯ ಮಾಡುತ್ತಿರುವ ತಂತ್ರಗಳು. ಕಾಂತರಾಜ್ ವರದಿಯಲ್ಲಿ ಸದಸ್ಯರು ಕೂಡ ಸಹಿ ಮಾಡಿಲ್ಲ. ಸಿದ್ದರಾಮಯ್ಯನವರು ಬೇರೆ ವರದಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಬಳಿಕ ಜನಿವಾರ ಒಂದೇ ಅಲ್ಲ, ನಮ್ಮ ಸಂಸ್ಕೃತಿ ಮೇಲೂ ದಾಳಿ ಮಾಡುತ್ತಿದ್ದಾರೆ. ಶೋಷಿತರಿಗೆ, ಹಿಂದುಳಿದವರಿಗೆ ಉಪಯೋಗವಾಗುವಂತೆ ತಂತ್ರ ರೂಪಿಸಬೇಕಿತ್ತು.
ಸಿದ್ದರಾಮಯ್ಯನವರೇ ವೀರಶೈವ ಲಿಂಗಾಯತರನ್ನು ಒಡೆದ್ರಿ, ಅದರೆ ಮುಸ್ಲಿಮರಲ್ಲಿ ದಲಿತರಿದ್ದಾರೆ ಅವರಿಗೂ ನ್ಯಾಯ ಕೊಡಿಸಿ. ಅದನ್ನು ಬಿಟ್ಟು ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಮುಖಂಡ ಬಿ.ಸಿ ಹನುಮಂತೇಗೌಡ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.