ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಿದ್ದರಾಮಯ್ಯ ಅವರು 2028ರವರೆಗೆ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಪುರಭವನದ ಬಳಿ ಸಂವಿಧಾನ ಪೀಠ ಉದ್ಘಾಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಹೆಚ್.ಸಿ. ಮಹದೇವಪ್ಪ ಎಂದು ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾಗ ಪ್ರತಿಕ್ರಿಯಿಸಿದ ಅವರು, ಇರುವುದೊಂದೇ ಸಿಎಂ ಕುರ್ಚಿ, ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕೂತಿದ್ದಾರೆ. 2028ರ ತನಕ ಅವರೇ ಕೂಳಿತಿರುತ್ತಾರೆ ಎನ್ನುವ ಮೂಲಕ ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಪರೋಕ್ಷವಾಗಿ ಸಚಿವ ಮಹದೇವಪ್ಪ ಹೇಳಿದರು.
ದಸರಾ ಉದ್ಘಾಟಕರ ವಿವಾದ ವಿಚಾರ ಸಂವಿಧಾನದ ಪೀಠಿಕೆ ಟೌನ್ ಹಾಲ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶವಿದೆ. ಇದರ ಉದ್ದೇಶ ಬಹುತ್ವ ಕಾಪಾಡುವುದು. ಇಲ್ಲಿ ಗೊಂದಲ, ಅನುಮಾನ, ಅಪಮಾನ ಹಾಗೂ ದ್ವೇಷಕ್ಕೆ ಅವಕಾಶವಿಲ್ಲ ಎಂದು ಸಂವಿಧಾನ ಹೇಳಿದೆ.
ಇದನ್ನೇ ಸುಪ್ರೀಂ ಕೋರ್ಟ್ ಕೂಡ ಹೇಳಿದ್ದು, ವಿರೋಧಿಗಳಿಗೆ ಸುಪ್ರೀಂ ಕೋರ್ಟ್ ಬೀಗ ಹಾಕಿದೆ ಎಂದು ಸಚಿವರು ಹೇಳಿದರು. ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಎಲ್ಲರೂ ಒಂದಾಗಿ ಆಚರಿಸೋಣ. ವಿರೋಧಿಗಳಿಗೂ ಬುದ್ಧಿ ಬರಲಿ. ಎಲ್ಲರೂ ಒಟ್ಟಾಗಿ ದಸರಾ ಆಚರಿಸೋಣ ಬನ್ನಿ ಎಂದು ಸಚಿವರು ಕರೆ ನೀಡಿದರು.
ಹಿಂದೂಗಳನ್ನು ಟಾರ್ಗೆಟ್ ಮಾಡಿಲ್ಲ:
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಪ್ರತಿ ಪ್ರಜೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದುಕು ಹೇಗಿದೆ ಎಂದು ತಿಳಿದುಕೊಳ್ಳಲು ಸಮೀಕ್ಷೆ ಮಾಡುತ್ತಿದ್ದೇವೆ. ಇದರಲ್ಲಿ ಬಿಜೆಪಿ ವಿರೋಧ ಮಾಡಲು ಏನಿದೆ?. ಇರುವ ಜಾತಿಗಳ ಸಮೀಕ್ಷೆ ಮಾಡುತ್ತಿದ್ದೇವೆ.
ನಾವು ಯಾವುದೇ ಜಾತಿ ಹುಟ್ಟುಹಾಕುತ್ತಿಲ್ಲ. ಹಿಂದೂಗಳನ್ನು ಒಡೆಯುವ ಪ್ರಮೇಯ ಇಲ್ಲ. ಹಿಂದೂಗಳನ್ನು ಟಾರ್ಗೆಟ್ ಮಾಡಿಲ್ಲ. ಇದು ಬಿಜೆಪಿಯವರು ಸೃಷ್ಠಿಸಿರುವ ಅಪ್ಪಟ ಸುಳ್ಳು ಎಂದು ಮಹದೇವಪ್ಪ ಟೀಕಾಪ್ರಹಾರ ಮಾಡಿದರು.
ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ?, ಬಲವಂತವಾಗಿ ಮತಾಂತರ ಮಾಡುವುದು ತಪ್ಪು ಎಂದು ಸಚಿವರು ತಿಳಿಸಿದರು.

