ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025-26ನೇ ಸಾಲಿನ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, 2024-25ನೇ ಸಾಲಿನ ತೆರಿಗೆ ಸಂಗ್ರಹದಲ್ಲಿ ಈವರೆಗೂ 35% ಕೊರತೆ ಎದುರಾಗಿರುವುದು ರಾಜ್ಯದಲ್ಲಿ ಕುಸಿದಿರುವ ಆರ್ಥಿಕ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024-25 ನೇ ಸಾಲಿನ ಬಜೆಟ್ ಪ್ರಕಾರ ತೆರಿಗೆ ಸಂಗ್ರಹದ ಗುರಿ ಇದ್ದಿದ್ದು 1,87,525 ಕೋಟಿ ರೂಪಾಯಿ. ಆದರೆ ಡಿಸೆಂಬರ್ ವರೆಗೆ ಕೇವಲ 1,25,101 ಕೋಟಿ ರೂಪಾಯಿ ಸಂಗ್ರಹ ಆಗಿದ್ದು ಕೇವಲ 35% ತೆರಿಗೆ ಸಂಗ್ರಹ ಕುಂಠಿತವಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಸ್ವಯಂಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯ ನವರೇ, ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಈ ಎಲ್ಲ ನಾಲ್ಕು ಮೂಲಗಳಿಂದಲೂ ಆದಾಯ ಕೊರತೆಯಾಗಿದೆಯಲ್ಲ ಇದಕ್ಕೇನು ಕಾರಣ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ತಾವೇ ಹೇಳುವಂತೆ ತಮ್ಮ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5000-6000 ರೂಪಾಯಿ ಉಳಿತಾಯವಾಗುತ್ತದೆ. ಹಾಗಾದರೆ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರಬೇಕು. ಕೊಳ್ಳುವ ಸಾಮರ್ಥ್ಯ ಹೆಚ್ಚಾದರೆ ತೆರಿಗೆ ಸಂಗ್ರಹ ಹೆಚ್ಚಾಗಬೇಕಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆಯಿಂದ ಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ ಎಂದು ಹೇಳಿದ್ದೀರಿ. ಹಾಗಾದರೆ ಅವರ ಕೊಳ್ಳುವ ಸಾಮಾರ್ಥ್ಯ ಹೆಚ್ಚಾಗಿ ತೆರಿಗೆ ಸಂಗ್ರಹವೂ ಹೆಚ್ಚಾಗಿರಬೇಕಲ್ಲವೇ?
ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಣದ ಕೊರತೆ ಇಲ್ಲ ಎಂದು ಹೇಳುತ್ತೀರಿ. ಹಾಗಾದರೆ ತೆರಿಗೆ ಸಂಗ್ರಹದಲ್ಲಿ ಯಾಕೆ 35% ಕೊರತೆ ಎದುರಾಗಿದೆ? ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದರೆ ಅಲ್ಲವೇ ಪಾಪ ಅವರು ತೆರಿಗೆ ಕಟ್ಟೋದು.
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಕೊರತೆ ಆಗಿದೆ ಅಂದರೆ ಕಟ್ಟಡ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಎಲ್ಲವೂ ಕುಸಿದಿದೆ ಎಂದೇ ಅರ್ಥ ಅಲ್ಲವೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
15 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ತಮ್ಮ ಬಳಿ ಇದಕ್ಕೆಲ್ಲಾ ಉತ್ತರವಿರಬೇಕಲ್ಲವೇ? ಕರ್ನಾಟಕ ರಾಜ್ಯ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಮತ್ತು ಕೆಟ್ಟ ಸರ್ಕಾರ ಎಂದು ಇತಿಹಾಸದಲ್ಲಿ ದಾಖಲಾಗುವ ಕುಖ್ಯಾತಿ ಪಡೆಯುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ. ಇನ್ನೊಂದು ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆಯನ್ನ ಮತ್ತೊಂದು ವರ್ಷ ಕತ್ತಲೆಗೆ ದೂಡಬೇಡಿ ಎಂದು ಅಶೋಕ್ ಸಲಹೆ ನೀಡಿದ್ದಾರೆ.