ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ ಕಳೆದ 6 ತಿಂಗಳಿಂದ ಬಿಲ್ ಪಾವತಿಸದ ಕಾರಣಕ್ಕಾಗಿ ಲಾರಿ ಮಾಲೀಕರು ಇಂದಿನಿಂದ ಮುಷ್ಕರ ಆರಂಭಿಸಿದ್ದು ರಾಜ್ಯದಲ್ಲಿ ಆಹಾರ ಧಾನ್ಯ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ಲಾರಿ ಮಾಲೀಕರಿಗೆ 6 ತಿಂಗಳಿಂದ 250 ಕೋಟಿ ರೂಪಾಯಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದೀರಲ್ಲ, ಪಾಪ ಲಾರಿ ಮಾಲೀಕರು ಚಾಲಕರಿಗೆ ಸಂಬಳ ಹೇಗೆ ಕೊಡಬೇಕು? ಲಾರಿಗಳಿಗೆ ಡೀಸೆಲ್ ಹೇಗೆ ಹಾಕಿಸಬೇಕು? ಲಾರಿ ಮುಷ್ಕರದಿಂದ ಆಹಾರ ಧಾನ್ಯ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಬಡವರಿಗೆ ಪಡಿತರ ಪೂರೈಕೆ ವಿಳಂಬವಾದರೆ ಅದಕ್ಕೆ ಯಾರು ಹೊಣೆ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ವಿಪಕ್ಷಗಳು ಸರ್ಕಾರ ದಿವಾಳಿ ಆಗಿದೆ ಎಂದು ಟೀಕೆ ಮಾಡಿದರೆ, ಅದು ಸುಳ್ಳು, ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡುತ್ತೀರಿ. ಇಲ್ಲಿ ನೋಡಿದರೆ ಲಾರಿ ಮಾಲೀಕರಿಗೆ ಆರು ತಿಂಗಳಿಂದ 250 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದೀರಿ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹ ಮಾಡಿದ್ದಾರೆ.