ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 8.89 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 622.54 ಕೋಟಿ ರೂಪಾಯಿ ಪ್ರೋತ್ಸಾಹ ಧಾನವನ್ನ ಕಳೆದ 6 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ ನಂದಿನಿ ಬ್ರ್ಯಾಂಡ್ ಅನ್ನ ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು ಎಂದು ಅಶೋಕ್ ಎಚ್ಚರಿಸಿದ್ದಾರೆ.