ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಅತ್ಯಂತ ಮುಖ್ಯ-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ಪಡೆಯುವುದು ಅಗತ್ಯವಾಗಿದ್ದು, ಸಮಾಜದ ಅಸಮಾನತೆಯನ್ನು ತೊಲಗಿಸಲು ಪ್ರತಿಯೊಬ್ಬರೂ ಶಿಕ್ಷಿತರಾಗಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜೆಯು ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ನಲ್ಲಿ ಆಯೋಜಿಸಿದ್ದ ದಾರುಲ್ ಕುರಾನ್ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ, ಪ್ರತಿಯೊಬ್ಬರಿಗೂ ವಿದ್ಯೆ ಮುಖ್ಯ. ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಅತ್ಯಂತ ಮುಖ್ಯ. ಸಾಮಾಜಿಕ ಸಂಕೋಲೆಗಳಿಂದ ಮುಕ್ತರಾಗಲು ಶಿಕ್ಷಣ ಅಗತ್ಯವೆಂದು ಡಾ.ಬಿ.ಆರ್. ಅಂಬೇಡ್ಕರ್ ರವರು ತಿಳಿಸಿದ್ದಾರೆ. ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು. ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ಪಡೆಯುವುದು ಅಗತ್ಯವಾಗಿದ್ದು, ಸಮಾಜದ ಅಸಮಾನತೆಯನ್ನು ತೊಲಗಿಸಲು ಶಿಕ್ಷಿತರಾಗಲೇಬೇಕು ಎಂದು ಸಿಎಂ ಕರೆ ನೀಡಿದರು.

- Advertisement - 

ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಷ್ಟೇ ಎಲ್ಲರಿಗೂ ಶಿಕ್ಷಣ ಪಡೆಯುವ ಸಮಾನ ಅವಕಾಶ ಸಾಧ್ಯವಾಯಿತು. ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ ಅನುದಾನವನ್ನೂ ನೀಡಲಾಗುವುದು. ಅಲ್ಲದೇ ವಸತಿ ಶಾಲೆಗಳನ್ನು ಸ್ಥಾಪಿಸಿ ಮುಸಲ್ಮಾನ ಬಂಧುಗಳಿಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಿಕ್ಷಣಕ್ಕೂ ಅನುಕೂಲವಾಗಿದೆ ಎಂದು ತಿಳಿಸಿದರು.

ತಮ್ಮ ಧರ್ಮವನ್ನು ಪಾಲಿಸುತ್ತಾ ಪರ ಧರ್ಮವನ್ನು ಗೌರವಿಸಬೇಕು, ಸಹಬಾಳ್ವೆ, ಸೌಹಾರ್ದತೆಯನ್ನು ಪಾಲಿಸಬೇಕು ಎಂದು ನಮ್ಮ ಸಂವಿಧಾನ ತಿಳಿಸುತ್ತದೆ. ಯಾವುದೇ ಧರ್ಮ ದ್ವೇಷವನ್ನು ಪ್ರಚೋದಿಸುವುದಿಲ್ಲ. ದ್ವೇಷರಾಜಕಾರಣ ಮಾಡಬಾರದು. ದ್ವೇಷದಿಂದ ಯಾರ ಮನಸ್ಸನ್ನೂ ಗೆಲ್ಲಲು ಸಾಧ್ಯವಿಲ್ಲ. ಈ ಅರಿವಿಗೆ ಶಿಕ್ಷಣ ಮುಖ್ಯ ಎಂದು ಸಿಎಂ ಅಭಿಪ್ರಾಯಪಟ್ಟರು.

- Advertisement - 

ಅಜೀಂ ಪ್ರೇಮ್‌ಜಿ ಅವರ ವಿಪ್ರೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದಲ್ಲದೇ ರಾಗಿ ಮಾಲ್ಟ್ , ಹಾಲು, ಬಿಸಿಯೂಟ ಒದಗಿಸಲಾಗುತ್ತಿದೆ. ಕಾಲೇಜಿನಲ್ಲಿ ಓದುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅಜೀಂ ಪ್ರೇಮ್‌ಜಿ ಅವರೂ ಇದಕ್ಕೆ ಕೈಜೋಡಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಹೇಳಿದರು.

ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸೀಮಿತವಾಗಿದೆ. ಇತ್ತೀಚೆಗೆ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳು ವಿದ್ಯಾವಂತರಾಗುತ್ತಿರುವುದು ಉತ್ತಮ ಬೆಳವಣಿಗೆ. ಹಿಂದೆ ಶೂದ್ರ ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಈಗ ಸಮಾನ ಅವಕಾಶಗಳು ಲಭ್ಯವಾಗಿದೆ. 

ಅಸಮಾನತೆ ಹೋಗಬೇಕೆನ್ನುವ ಕಾರಣದಿಂದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಸಂವಿಧಾನ ಇದನ್ನೇ ಹೇಳುತ್ತದೆ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸಂವಿಧಾನ ತಿಳಿದವರಿಂದ ಮಾತ್ರ ಸಮಾಜಮುಖಿ ಕೆಲಸ ಮಾಡಲು ಸಾಧ್ಯ.

ಮಕ್ಕಳನ್ನು ಯಾವುದೇ ಕಾರಣಕ್ಕೂ ಅವಿದ್ಯಾವಂತರನ್ನಾಗಿಸಬಾರದು. ಶಿಕ್ಷಣ ಕೊಡಿಸಲೇಬೇಕು. ಎಲ್ಲರೂ ವಿದ್ಯಾವಂತರಾದರೆ ಭವ್ಯ ಭಾರತ ಕಟ್ಟಬಹುದು, ಸಮ ಸಮಾಜ ನಿರ್ಮಿಸಬಹುದು. ನಾವೂ – ನೀವೂ ಎಲ್ಲರೂ ಮೊದಲು ಭಾರತೀಯರು. ಆಮೇಲೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎನಿಸಿಕೊಳ್ಳುತ್ತೇವೆ. ಎಲ್ಲರೂ ಭಾರತೀಯರಾಗಿ ಭಾರತವನ್ನು ಕಟ್ಟೋಣ. ದ್ವೇಷ ಬಿಟ್ಟು ಪರಸ್ಪರ ಪ್ರೀತಿ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

 

Share This Article
error: Content is protected !!
";