ಒಳ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ, ಆದರೆ ಫಲಿತಾಂಶ ಪ್ರಕಟಿಸಬೇಡಿ ಎಂದಿದೆ-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸಿದ್ದರಾಮಯ್ಯನವರ ನಂತರದ ಉತ್ತರಾಧಿಕಾರಿ ಸತೀಶ್​ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಿತ್ತೂರು ಉತ್ಸವದ ಸಮಾರೋಪ‌ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಯತೀಂದ್ರ ಹೇಳಿದ್ದು ಸೈದ್ಧಾಂತಿಕವಾಗಿ ಮಾತ್ರ. ಲೀಡರ್ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement - 

ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ. ಈಗ ಅದನ್ನು ಸತೀಶ್ ಜಾರಕಿಹೊಳಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಸತೀಶ್​ ಜಾರಕಿಹೊಳಿ ಅವರೇ ಮುಂದೆ ನಾಯಕರು ಆಗಬೇಕು ಅಂತಾ ಹೇಳಿದ್ದಾರಾ..? ಯಾರನ್ನು ಲೀಡರ್ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಮತ್ತು ಯತೀಂದ್ರ ನಾಯಕನನ್ನು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಎರಡೂವರೆ ವರ್ಷ ಆದ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಹೇಳಿತ್ತು. ಹಾಗಾಗಿ, ಹೈಕಮಾಂಡ್ ಹೇಳಿದರೆ ಸಂಪುಟ ವಿಸ್ತರಣೆ ಮಾಡುತ್ತೇನೆ. ನಾಲ್ಕು ತಿಂಗಳ ಹಿಂದೆ ಹೈಕಮಾಂಡ್ ಸಂಪುಟ ಪುನರ್ ರಚನೆ ಮಾಡುವಂತೆ ಹೇಳಿತ್ತು. ಆಗ ಸರ್ಕಾರಕ್ಕೆ ಎರಡೂವರೆ ವರ್ಷ ಆದ ಮೇಲೆ ಮಾಡೋಣ ಅಂತಾ ನಾನು ತಿಳಿಸಿದ್ದೆ. ಹಾಗಾಗಿ ಎರಡೂವರೆ ವರ್ಷ ಆಗಲಿ. ಆಗ ಹೈಕಮಾಂಡ್ ಜೊತೆಗೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement - 

ದೆಹಲಿ ಪ್ರವಾಸದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಕಪಿಲ್ ಸಿಬಲ್ ಅವರು ಬರೆದಿರುವ ಪುಸ್ತಕ ಬಿಡುಗಡೆಗೆ ದೆಹಲಿಗೆ ಹೋಗುತ್ತಿದ್ದೇನೆ. ಆ ವೇಳೆ ನಾನು ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಆಗುತ್ತೇನೆ. ಭೇಟಿ ಆಗಲೇಬೇಕು, ಯಾಕೆಂದರೆ ಅದು ನಮ್ಮ ಹೈಕಮಾಂಡ್. ರಾಜ್ಯದಲ್ಲಿ ಏನು ನಡೆಯುತ್ತಿದೆ? ಹೇಗೆ ಆಡಳಿತ ನಡೆಯುತ್ತಿದೆ ಎಂಬುದನ್ನು ಹೈಕಮಾಂಡ್​ಗೆ ತಿಳಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಾಬಾಸಾಹೇಬ ಪಾಟೀಲ ಒತ್ತಾಯಿಸಿದ್ದರಿಂದ ಕಿತ್ತೂರು ಉತ್ಸವಕ್ಕೆ ಬಂದಿದ್ದೇನೆ.‌ ವೀರಜ್ಯೋತಿ ಯಾತ್ರೆಗೆ ನಾನೇ ಚಾಲನೆ ನೀಡಿದ್ದೆ. ಉತ್ಸವದ ಸಮಾರೋಪ‌ ಸಮಾರಂಭಕ್ಕೆ ಬಂದಿದ್ದೇನೆ.‌ ಮುಂದಿನ ವರ್ಷ ನಡೆಯುವ ಉತ್ಸವಕ್ಕೆ ನಾನು ಮೂರನೇ ಬಾರಿಯೂ ಬರುವ ಪ್ರಯತ್ನ ಮಾಡುತ್ತೇನೆ.

ಮುಂದಿನ ವರ್ಷ ಕಿತ್ತೂರು ಉತ್ಸವ ಹೇಗೆ ಮಾಡಬೇಕು ಎಂಬುದನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಬಿಡುತ್ತೇನೆ. ಕಾರ್ಯಕ್ರಮ ಯಾವ ರೀತಿ ಮಾಡುತ್ತಾರೆ ಅನ್ನೋದನ್ನು ನೋಡಿಕೊಂಡು ಹೆಚ್ಚಿನ ಅನುದಾನ ಉತ್ಸವಕ್ಕೆ ಕೊಡುವ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಒಳಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ವಿಚಾರ ಕುರಿತಂತೆ ಮಾತನಾಡಿ, ತಡೆಯಾಜ್ಞೆ ನೀಡಿಲ್ಲ. ಕೆಪಿಎಸ್ಸಿಯವರಿಗೆ ಸಂದರ್ಶನ ಮಾಡಿ, ಆದರೆ, ಫಲಿತಾಂಶ ಪ್ರಕಟಿಸಬೇಡಿ ಅಂತಾ ಕೋರ್ಟ್ ಹೇಳಿದೆ. ಫಲಿತಾಂಶ ಪ್ರಕಟಿಸುವ ಮುನ್ನ ನಮ್ಮನ್ನು ಕೇಳುವಂತೆ ಕೋರ್ಟ್ ತಿಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನ ನಡೆಯುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ‌ ನಿಗದಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

371ಜೆ ಇರುವ ಕಾರಣಕ್ಕೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ನೀಡಲಾಗಿದೆ. 371ಜೆ ಸ್ಥಾನಮಾನ ನೀಡಿದ್ದು ಮನಮೋಹನ್ ಸಿಂಗ್ ಅವರು. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಮತ್ತು ನಮ್ಮೆಲ್ಲರ ಹೋರಾಟದ ಫಲವಾಗಿ ಅದು ಘೋಷಣೆ ಆಗಿತ್ತು. ಹಾಗಾಗಿ, ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ನೀಡುವ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

 

Share This Article
error: Content is protected !!
";