ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಹಳ್ಳ ಹಿಡಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ಕರ್ನಾಟಕವನ್ನು ಸಾಲದ ಶೂಲಕ್ಕೆ ಏರಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೊಕ್ಕಸವನ್ನು ಸಂಪೂರ್ಣವಾಗಿ ಬರಿದಾಗಿಸಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಆರೋಪಿಸಿದ್ದಾರೆ.
ರಾಜ್ಯದ ಸಾಲದ ಪ್ರಮಾಣ ಕರ್ನಾಟಕದ ಜಿಡಿಪಿಯ 25%ವನ್ನೂ ದಾಟಿ ಸಾಗಲು ಸಜ್ಜಾಗಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸ್ವತಃ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಈ ವಾಸ್ತವದ ಅರಿವಿಲ್ಲವೇ? ಅಧಿಕಾರದ ಆಸೆಗಾಗಿ ಇಲ್ಲಸಲ್ಲದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ರಾಜ್ಯದ ಸಾಲದ ಪ್ರಮಾಣ 8 ಲಕ್ಷ ಕೋಟಿಯ ಗಡಿ ತಲುಪಿದೆ ಎಂದು ಅವರು ಟೀಕಾಪ್ರಹಾರ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗ, ರಾಜ್ಯದ ಸಾಲದ ಪ್ರಮಾಣ ಕೇವಲ 3 ಲಕ್ಷ ಕೋಟಿ ರೂಪಾಯಿಗಳ ಆಸುಪಾಸಿನಲ್ಲಿತ್ತು. ಆದರೆ, ಅವಾಸ್ತವಿಕ ಗ್ಯಾರಂಟಿಗಳು, ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಕ್ಯಾಬಿನೆಟ್ ದರ್ಜೆಯ ಹೆಸರಿನಲ್ಲಿ ಅನವಶ್ಯಕ ಖರ್ಚು, ಹಗರಣಗಳ ಮೂಲಕ ರಾಜ್ಯವನ್ನು ದಿವಾಳಿ ಎಬ್ಬಿಸಲು ಸರ್ಕಾರ ಸಿದ್ಧವಾಗಿದೆ. ಕಾಂಗ್ರೆಸ್ ಸರ್ಕಾರದ ಅಂತ್ಯದ ವೇಳೆಗೆ, ರಾಜ್ಯ ಇತಿಹಾಸದಲ್ಲೇ ಕಂಡರಿಯದ ಸಾಲದ ಸುಳಿಗೆ ಸಿಲುಕಿರಲಿದೆ ಎಂದು ರವಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

