ಚಂದ್ರವಳ್ಳಿ ನ್ಯೂಸ್, ಮೈಸೂರು:
ಕುರುಬರ ತನು ಮನ ಎಲ್ಲವನ್ನೂ ಬಳಸಿಕೊಂಡು ಸಿಎಂ ಸಿದ್ಧರಾಮಯ್ಯ ಮೇಲೆ ಬಂದಿದ್ದಾರೆ. ಆದರೆ ಕುರುಬ ಸಮುದಾಯಕ್ಕಾಗಿ ಅವರು ಯಾವುದೇ ಕೊಡುಗೆ ನೀಡಿಲ್ಲ. ಈಗ ಅವರಿಗೆ ಮತ್ತೆ ಸಂಕಷ್ಟ ಬಂದಿದೆ. ಅದಕ್ಕಾಗಿ ಕುರುಬರು ನೆನಪಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಅವರು ಮನಸ್ಸು ಮಾಡಿದ್ದಿದ್ದರೆ ಎಂದೋ ಈ ಕೆಲಸ ಮಾಡಬಹುದಿತ್ತು. ಕುರುಬ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದ ಅವರು,
ಆ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿದರು. ಸಮುದಾಯದ ನಾಯಕರನ್ನು ಅವರು ಬೆಳೆಯಲು ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುವ ಸಿಎಂ, ಈ ವರ್ಗಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, ಹೋರಾಟ ಮಾಡಲಿಲ್ಲ. ಬರೀ ಬೊಗಳೆ ಬಿಟ್ಟುಕೊಂಡು ಓಡಾಡ್ತಿದ್ದಾರೆ. ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ವಿಶ್ವನಾಥ್ ಟೀಕಾಪ್ರಹಾರ ಮಾಡಿದರು.
ವಾಲ್ಮೀಕಿ ನಾಯಕ ಸಮುದಾಯದವರನ್ನು ಎಸ್ಟಿ ಮೀಸಲಾತಿ ಸೌಲಭ್ಯಕ್ಕೆ ಸೇರಿಸಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಈಗ ಕಾಗಿನೆಲೆ ಮಠಾಧಿಪತಿಗಳನ್ನು ಸಿದ್ಧರಾಮಯ್ಯ ಮುಂದಕ್ಕೆ ಬಿಡ್ತಾರೆ. ಆದರೆ ಸ್ವಾಮೀಜಿಗಳನ್ನು ಸಿದ್ಧರಾಮಯ್ಯ ಪೀಠಾಧಿಪತಿಯನ್ನಾಗಿ ಮಾಡಿಲ್ಲ. ನಿಮ್ಮನ್ನು ಪೀಠಾಧಿಪತಿ ಮಾಡಿದ್ದು ವಿಶ್ವನಾಥ್. ಮಠಕ್ಕೂ ಸಿದ್ಧರಾಮಯ್ಯಗೂ ಯಾವುದೇ ಸಂಬಂಧವಿಲ್ಲ. ಮಠಾಧಿಪತಿಗಳೇನು ಸಿದ್ಧರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ ಎಂದು ವಿಶ್ವನಾಥ್ ಹರಿಹಾಯ್ದರು.
ಮಠಾಧಿಪತಿಗಳು, ಸಿದ್ಧರಾಮಯ್ಯ ಅಥವಾ ಕಾಂಗ್ರೆಸ್ ಪರವಾಗಿ ಬೀದಿಗಿಳಿದರೆ ನಿಮ್ಮ ತಲೆದಂಡವಾಗಲಿದೆ. ನಿಮ್ಮನ್ನು ಪೀಠದಿಂದ ಕೆಳಗಿಳಿಸಬೇಕಾಗುತ್ತದೆ. ಕುರುಬರ ಹುಡುಗರಿಗೆ ಸಿದ್ಧರಾಮಯ್ಯ ಉತ್ತಮ ಭವಿಷ್ಯ ರೂಪಿಸಲಿಲ್ಲ ಎಂದು ಅವರು ಎಚ್ಚರಿಸಿದರು.
ವರದಿ ಜಾರಿಗೆ ಧೈರ್ಯ ತೋರಲಿಲ್ಲ:
ಕಾಂತರಾಜು ಆಯೋಗ ನೀಡಿರುವ ಜಾತಿಗಣತಿ ವರದಿ ನೀಟಾಗಿದೆ. ಆದರೆ, ಅದನ್ನು ಜಾರಿಗೊಳಿಸಲು ಧೈರ್ಯ ತೋರದ ಸಿದ್ಧರಾಮಯ್ಯ, ಕಾಂತರಾಜು ಆಯೋಗ ನೀಡಿದ ಜಾತಿಗಣತಿ ವರದಿಯನ್ನು 10 ವರ್ಷ ಕಾಲ ತಲೆಕೆಳಗೆ ಇಟ್ಟುಕೊಂಡು ಮಲಗಿದ್ದರು. ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿ ಎಂಬುದಕ್ಕೆ ಇದು ಸಾಕ್ಷಿ ಎಂದು ವಿಶ್ವನಾಥ್ ಕಿಡಿಕಾರಿದರು.
ಇಲ್ಲಿಯವರೆಗೆ ಗ್ಯಾರಂಟಿಗೆ 96,000 ಕೋಟಿ ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಈಗಾಗಲೇ ಏಳೂವರೆ ಲಕ್ಷ ಕೋಟಿ ರಾಜ್ಯದ ಜನರ ಮೇಲೆ ಸಾಲ ಮಾಡಿದ್ದೀರಿ.
ಇಷ್ಟು ಸಾಲ ಇದ್ದು ನೀವು ಸಮಾವೇಶ ಮಾಡುತ್ತಿದ್ದೀರಿ. ಹೆಲಿಕಾಪ್ಟರ್ನಲ್ಲಿ ಬಂದು ಹೆಲಿಕಾಪ್ಟರ್ನಲ್ಲಿ ಹೋಗುವುದೇ ನಿಮ್ಮ ಸಾಧನೆ ಎಂದು ಸಿದ್ದರಾಮಯ್ಯನವರ ವಿರುದ್ಧ ವಿಶ್ವನಾಥ್ ಹಿಂದೆಯೇ ವಾಗ್ದಾಳಿ ನಡೆಸಿದ್ದನ್ನು ಸ್ಮರಿಸಬಹದಾಗಿದೆ.

