ಸಿದ್ದರಾಮಯ್ಯ ಮಾದಿಗರ ವಿರೋಧಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾವಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪನ್ನು ನಿಜವಾಗಿಯೂ ಗೌರವಿಸುವುದಾದರೆ ತಕ್ಷಣವೆ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ರಾಜ್ಯದ ಮೂರು ವಿಧಾಸನಭೆಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮಾದಿಗರು ಮತ ನೀಡಬೇಕಾಗುತ್ತದೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್ ಬೆದರಿಕೆ ಹಾಕಿದರು.

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವಿಭಾಗದಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿಯನ್ನು ಜಾರಿಗೊಳಿಸುವುದು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಮೂರು ತಿಂಗಳಾಗುತ್ತಿದ್ದರೂ ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಎಂ.ಶಿವಮೂರ್ತಿ ಚಳ್ಳಕೆರೆ ಮಾತನಾಡಿ ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಆಯೋಗ ರಚಿಸುವ ನಾಟಕವಾಡುತ್ತಿರುವುದು ಅತ್ಯಂತ ಖಂಡನೀಯ.

ಒಂದೊಂದು ಕಡೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತ ಮಾದಿಗರನ್ನು ನಿರ್ಲಕ್ಷಿಸುವ ಬದಲು ಮೊದಲು ಒಳ ಮೀಸಲಾತಿ ಜಾರಿಗೆ ತರಲಿ. ಇಲ್ಲವಾದಲ್ಲಿ ಅಹಿತಕರ ಹೋರಾಟಕ್ಕೂ ಮಾದಿಗರು ಸಿದ್ದರಿದ್ದೇವೆ. ದತ್ತಾಂಶ, ಡಾಟಾ ಗೊತ್ತಿಲ್ಲದವರಂತೆ ನಾಟಕವಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಆಯೋಗದ ಮೇಲೊಂದು ಆಯೋಗ ರಚಿಸುವುದಾಗಿ ಹೇಳಿ ನಮ್ಮ ಕಿವಿಗೆ ಹೂವು ಮುಡಿಸುವುದು ಬೇಡ ಎಂದು ಎಚ್ಚರಿಸಿದರು.

ವಿಧಾನಸಭೆ ಉಪ ಚುನಾವಣೆ ನೆಪ ಹೇಳುತ್ತ ಒಳ ಮೀಸಲಾತಿ ಜಾರಿಗೆ ತರುವುದನ್ನು ವಿಳಂಬ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶಿವಮೂರ್ತಿ ಆಂಧ್ರ ಮಾದರಿಯಲ್ಲಿ ಹೋರಾಟಕ್ಕಿಳಿದು ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಾಗಿ ಕಿಡಿ ಕಾರಿದರು.

ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಗೂಳಿಹಟ್ಟಿ ಮಾತನಾಡಿ ಒಳ ಮೀಸಲಾತಿಗಾಗಿ ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸದಾಶಿವ ಆಯೋಗ ದತ್ತಾಂಶ ಕ್ರೂಢಿಕರಿಸಿಯೇ ಸರ್ಕಾರಕ್ಕೆ ವರದಿ ನೀಡಿದ ಮೇಲೆ ದತ್ತಾಂಶ ಡಾಟ ಎನ್ನುವ ಪದ ಮತ್ತೇಕೆ ಎಂದು ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

ಹರಿಯಾಣ, ತೆಲಂಗಾಣ ಸರ್ಕಾರಗಳು ಕೈಗೊಂಡ ದಿಟ್ಟ ನಿರ್ಧಾರದಂತೆ ರಾಜ್ಯ ಸರ್ಕಾರವು ತೀರ್ಮಾನ ತೆಗೆದುಕೊಂಡು ಮಾಧುಸ್ವಾಮಿ ನೀಡಿರುವ ದತ್ತಾಂಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಮಾತನಾಡಿ ಒಳ ಮೀಸಲಾತಿ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿಯಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಹೊಸ ಆಯೋಗ ರಚಿಸುವ ಪ್ರಸ್ತಾಪವೆತ್ತಿರುವುದನ್ನು ನೋಡಿದರೆ ಅಹಿಂದಾ ನಾಯಕ ಎಂದೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ವಿರೋಧಿ ಎನ್ನುವುದು ಗೊತ್ತಾಗುತ್ತದೆ.

ಕಣ್ಣೊರೆಸುವ ತಂತ್ರಗಾರಿಕೆ ಬೇಡ. ಕೂಡಲೆ ಒಳ ಮೀಸಲಾತಿ ಜಾರಿಯಾಗಬೇಕು. ಇಲ್ಲವಾದಲ್ಲಿ ಮೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಪಾಲಯ್ಯ, ಡಿ.ಓ.ಮುರಾರ್ಜಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಸ್ವಾಮಿ, ಡಿ.ತಿಪ್ಪೇಸ್ವಾಮಿ, ಸಿದ್ದಾರ್ಥ ವಿ. ನವೀನ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಕರಿಕೆರೆ ತಿಪ್ಪೇಸ್ವಾಮಿ, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";