ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದೆರೆಡು ವರ್ಷಗಳಿಂದ ಗ್ಯಾರಂಟಿ ಯೋಜನೆಗಳು ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಜಾರಿಯಾಗುತ್ತಿವೆ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವುದು ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಎರಡು ವರ್ಷಗಳ “ಪ್ರಗತಿಯತ್ತ ಕರ್ನಾಟಕ – ಸಮರ್ಪಣಾ ಸಂಕಲ್ಪ” ಕಾರ್ಯಕ್ರಮಕ್ಕೆ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನನಿಲ್ದಾಣದಲ್ಲಿ ನಾಡಿಗೆ ಬರ ಮಾಡಿಕೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೇಲೆ ಭರವಸೆಯನ್ನಿಟ್ಟು ಮತನೀಡಿ ಹರಸಿದ ಏಳು ಕೋಟಿ ಕನ್ನಡಿಗರ ನಂಬಿಕೆ – ವಿಶ್ವಾಸವನ್ನು ಉಳಿಸಿಕೊಂಡು, ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕಾರ್ಯವನ್ನು ಜಾರಿಮಾಡಿದ್ದೇವೆ. ಸಾಮಾಜಿಕ ನ್ಯಾಯ, ಸಹಬಾಳ್ವೆ, ಸಮಸ್ತ ಕರ್ನಾಟಕದ ಅಭಿವೃದ್ಧಿಯ ಮುನ್ನೋಟದೊಂದಿಗೆ ಆರಂಭಿಸಿದ ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣಕ್ಕಿಂದು ಎರಡು ವರ್ಷಗಳ ಸಂಭ್ರಮ.
ಸದೃಢ, ಸಶಕ್ತ, ಸ್ವಾವಲಂಬಿ, ಸೌಹಾರ್ದ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ನಮ್ಮ ಜೊತೆಯಾಗಿರುವ ನಾಡಿನ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಬಲ. ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲೆಂದು ಮುಖ್ಯಮಂತ್ರಿಗಳು ಆಶಿಸಿದ್ದಾರೆ.
ಕರ್ನಾಟಕದ ಇಂದಿನಸಾಧನೆ, ನಾಳೆಯ ಜಗಕೆ ಪ್ರೇರಣೆ-ನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವುದು ಮಾತ್ರವಲ್ಲ, ಸಮತೆ, ಸೌಹಾರ್ದತೆ ಮತ್ತು ಸಾಮರಸ್ಯದ ನೆಲೆಯಲ್ಲಿ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರನ್ನೂ ಒಳಗೊಳ್ಳುವ, ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುವ ಸುಸ್ಥಿರ, ಸರ್ವಾಂಗೀಣ ಪ್ರಗತಿಯ ಸಾಂವಿಧಾನಿಕ ಆಶಯವನ್ನು ಇಂದು ದೇಶದಲ್ಲೇ ಅಭೂತಪೂರ್ವ ರೀತಿಯಲ್ಲಿ ಸಾಕಾರಗೊಳಿಸುತ್ತಿರುವ ಹೆಮ್ಮೆ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.