ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಡೆದು ಅಳುವ ಕುತಂತ್ರ ಬುದ್ಧಿ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡಿರುವ ರೋಗ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ “ಜಾತಿ ಗಣತಿ ವರದಿ”ಯ ಡ್ರಾಮಾ ಶುರು ಮಾಡಿದ್ದಾರೆ.
ಅಂದು ಭಾರತಕ್ಕೆ ಬಂದು ಬ್ರಿಟಿಷರು ಭಾರತೀಯರನ್ನು ಒಡೆದು ಆಳ್ವಿಕೆ ಮಾಡುತ್ತಿದ್ದರು. ಇಂದು ಇಟಲಿ ಭಾರತೀಯ ಕಾಂಗ್ರೆಸ್ ಪಕ್ಷದ ಗುಲಾಮರು ಅದನ್ನೇ ಮುಂದುವರಿಸಿದ್ದಾರೆ ಎಂದು ಜೆಡಿಎಸ್ ಹರಿಹಾಯ್ದಿದೆ.
ವೈಜ್ಞಾನಿಕವಲ್ಲದ 10 ವರ್ಷಗಳ ಹಿಂದಿನ ಹಳಸಲು, ಕಾಟಾಚಾರದ ಸಮೀಕ್ಷೆಯನ್ನು ಜಾತಿ ಗಣತಿ ವರದಿಯಂದು ಬಿಂಬಿಸಿ, ಸಮುದಾಯಗಳ ಮಧ್ಯೆ “ದ್ವೇಷದ ವಿಷ ಬೀಜ” ಬಿತ್ತಲಾಗುತ್ತಿದೆ. ರಾಜ್ಯದ ಜನಸಂಖ್ಯೆಗೂ ವರದಿಯ ಅಂಕಿ- ಅಂಶಗಳಿಗೂ ತಾಳಮೇಳವೇ ಇಲ್ಲ ಎಂದು ಜೆಡಿಎಸ್ ಟೀಕಿಸಿದೆ.
ನನ್ನ ಮನೆಗೆ ಜಾತಿ ಗಣತಿ ಮಾಡುವವರು ಬಂದೇ ಇಲ್ಲ ಎಂದು ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ನೀಡಿದ್ದ ಬಹಿರಂಗ ಹೇಳಿಕೆ ಇದಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅಂಡ್‌ಟೀಂ ಸಿದ್ಧಪಡಿಸಿರುವ ರೆಡಿಮೇಡ್‌ವರದಿ ಎಂದು ಜೆಡಿಎಸ್ ಆರೋಪಿಸಿದೆ.
ದಶಕಗಳ ಹಿಂದಿನ ಈ ವರದಿಯಲ್ಲಿ ಹಲವು ನೂನ್ಯತೆಗಳಿವೆ, ಕ್ರಮಬದ್ಧವಾಗಿ ನಡೆದಿಲ್ಲ. ಮತ್ತು ಅಂಕಿ -ಅಂಶಗಳು ಅವಾಸ್ತವಿಕತೆಯಿಂದ ಕೂಡಿದೆ ಎಂದು ಸಂಪುಟದ ಸಚಿವರು ಮತ್ತು ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್‌ಸರ್ಕಾರದ ಪ್ರಾಯೋಚಿತ “ಜಾತಿ ಗಣತಿ ವರದಿ” ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.