ತೆರಿಗೆ ಪ್ರಗತಿ ಸಾಧಿಸದಿದ್ದರೆ ಮುಲಾಜಿಲ್ಲದೆ ಶಿಸ್ತು ಕ್ರಮ-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇನ್ನು ಮುಂದೆ ಪ್ರತಿ ತಿಂಗಳ ಕೊನೆಗೆ ನಾನೇ ಒನ್ ಟು ಒನ್ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ಬದಲಾವಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.  

2024-25 ನೇ ಸಾಲಿನಲ್ಲಿ ಒಟ್ಟು 1,10,000 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಅಕ್ಟೋಬರ್‌ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್‌ಟಿ ರೂ. 44,783 ಕೋಟಿ, ಕೆಎಸ್‌ಟಿ ರೂ. 13,193 ಕೋಟಿ, ವೃತ್ತಿ ತೆರಿಗೆ ರೂ. 797 ಕೋಟಿ ಸೇರಿದೆ.

ಅಕ್ಟೋಬರ್‌ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿರುತ್ತದೆ.

ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10,200ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್‌ಒಳಗಾಗಿ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇಬಾರದು ಎಂದು ಅವರು ಎಚ್ಚರಿಸಿದರು.

ಕರ ಸಮಾಧಾನ ಯೋಜನೆ ಅಡಿ ರೂ. 2 ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಣೆಯ ನಿರೀಕ್ಷೆಯಿದೆ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ ಮುಖ್ಯಮಂತ್ರಿ ಅವರು ತಿಳಿಸಿದರು.

ಸಚಿವರಾದ ಆರ್.ಬಿ.ತಿಮ್ಮಾಪುರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಜಾಫರ್ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಇ.ಶಿಖಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಅಬಕಾರಿ ಇಲಾಖೆ ಆಯುಕ್ತರಾದ ರವಿಶಂಕರ್ ಸೇರಿ ಇಲಾಖೆಯ ಇನ್ನಿತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";