ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಜನವರಿ –7ಕ್ಕೆ ಈ ನಾಡು ಕಂಡ ಶ್ರೇಷ್ಠ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಆಡಳಿತದ ದಿನಗಳ ದಾಖಲೆ ಮುರಿದಿದ್ದಾರೆ. ಅರಸು ಅವರು ಅಧಿಕಾರದಲ್ಲಿದ್ದ 2,789 ದಿನಗಳಿಗಿಂತ ಹೆಚ್ಚಿಗೆ 2,790 ದಿನ ಮುಗಿಸಿ ಅಧಿಕಾರದಲ್ಲಿ ಸಿದ್ದರಾಮಯ್ಯ ಅವರು ಮುಂದುವರೆದಿದ್ದಾರೆ.
ಸಿದ್ದರಾಮಯ್ಯ ಅವರು ಎಷ್ಟು ದಿನ ಅಧಿಕಾರದಲ್ಲಿ ಇದ್ದೀರಿ ಎನ್ನುವುದು ಮುಖ್ಯವಲ್ಲ. ಇದ್ದ ದಿನಗಳಲ್ಲಿ ಜನರಿಗಾಗಿ ಏನು ಮಾಡಿದಿರಿ ಎನ್ನುವುದು ಮುಖ್ಯ ಇದನ್ನು ಇತಿಹಾಸ ಕೇಳುತ್ತಿದೆ ಎಂದು ಪ್ರಭಾಕರ ಮ್ಯಾಸನಾಯಕ ಪ್ರಶ್ನಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಅರಸು ಅವರು ಅಜರಾಮರವಾಗಿ ಉಳಿದಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕಾರಣಕ್ಕಾಗಿ ಇತಿಹಾಸದಲ್ಲಿ ಉಳಿಯಬೇಕು ಎಂದು ಇತಿಹಾಸದ ಜತೆಗೆ ಜನ ಕೇಳ ತೊಡಗಿದ್ದಾರೆ.
ಅರಸು ಅವರು 1970ರ ದಶಕದಲ್ಲಿ ಪಕ್ಷದ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಂಡು ಕೇಳರಿಯದ ಜನರಿಗೆ ಟಿಕೆಟ್‌ಕೊಟ್ಟು ಅವರನ್ನು ಗೆಲ್ಲಿಸಿಕೊಂಡು ಬಂದರು. ಹಾಗೆ ಬಂದವರಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಮತ್ತು ಧರ್ಮಸಿಂಗ್‌ಮುಂತಾದವರು, ಖರ್ಗೆಯವರು ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರಿದರು. ಮೊಯಿಲಿ ಮತ್ತು ಧರ್ಮಸಿಂಗ್‌ಮುಖ್ಯಮಂತ್ರಿಗಳು ಕೂಡ ಆದರು. ಆದರೆ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದ ಒಬ್ಬೇ ಒಬ್ಬ ನಾಯಕ ಯಾವುದಾದರೂ ಒಂದು ಸ್ಥಾನಕ್ಕೆ ಏರಿದ್ದರೆ ಪ್ರಸ್ತುತಪಡಿಸಲಿ ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಎರಡು ಸಾರಿ ಮುಖ್ಯಮಂತ್ರಿ, ಎರಡು ಸಾರಿ ಉಪಮುಖ್ಯಮಂತ್ರಿ, ಎರಡು ಸಾರಿ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ, ಒಂದು ಸಾರಿಯೂ ಅವರು ಪಕ್ಷದ ಅಧ್ಯಕ್ಷರಾಗಿ ಇರಲಿಲ್ಲ ಎನ್ನುವುದು ಸತ್ಯವಾದ ಮಾತು.
ಬೂತ್ ಮಟ್ಟದಿಂದ ಕೆಲಸ ಮಾಡಿದ ಕಾರ್ಯಕರ್ತ ಅಧಿಕಾರಕ್ಕೆ ಬರಬೇಕು ಎಂಬುದು ಜನಾಭಿಪ್ರಾಯವೂ ಕೂಡ ಹೌದು, ಆದರೆ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಇದು ತದ್ವಿರುದ್ಧವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಜವಾಗಿ ಶ್ರಮಿಸಿದವರು. ಅದಕ್ಕಾಗಿ ಅವರು ತಮ್ಮ ಜಾತಿಯವರಲ್ಲದ ನಾಯಕ ಸಮುದಾಯಕ್ಕೆ ಸೇರಿದ ಎಲ್.ಜಿ. ಹಾವನೂರು ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ ಅವರು ಕೊಟ್ಟ ವರದಿಯನ್ನು ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಜಾರಿಗೊಳಿಸಿದರು.
ಮತ್ತು ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದು ದೀನದಲಿತರ ಅಭಿವೃದ್ಧಿಗೆ ಶ್ರಮಿಸಿದ ದೇವರಾಜು ಅರಸು ಅವರು ಹಿಂದುಳಿದ ವರ್ಗಗಳ ನಾಯಕ ಎಂದೆನಿಸಿಕೊಂಡರು. ಅದಕ್ಕಾಗಿ ಇಂದು ಅರಸು ಅವರು ಹಿಂದುಳಿದ ವರ್ಗಗಳ ಜನರ ಜೀವನದ ದೊಡ್ಡ ಆಶಾಕಿರಣ ಎನಿಸಿದ್ದಾರೆ.
ಬದ್ಧತೆ ಮತ್ತು ಆಢಾಢಭೂತಿತನ:
ಈ ವಿಚಾರದಲ್ಲಿ ಅರಸು ಅವರ ಬದ್ಧತೆ ಎಲ್ಲಿ? ಸಿದ್ದರಾಮಯ್ಯನವರ ಆಷಾಢಭೂತಿತನ ಎಲ್ಲಿ? ಎತ್ತಣ ಮಾಮರ! ಎತ್ತಣ ಕೋಗಿಲೆ? ಅರಸು ಅವರದು ನಿಸ್ವಾರ್ಥ ರಾಜಕಾರಣ. ಸಿದ್ದರಾಮಯ್ಯನವರದು ಪರಮ ಸ್ವಾರ್ಥದ ರಾಜಕಾರಣ.
ಮುತ್ಸದ್ದಿಗಳನ್ನು ಮಾತ್ರ ಈ ದೇಶ ನೆನಪು ಇಡುತ್ತದೆ.
ಇತಿಹಾಸವು ದಾಖಲಿಸುತ್ತದೆ. ರಾಜಕಾರಣಿಗಳನ್ನು ಜನರು ಬಹುಬೇಗ ಮರೆಯುತ್ತಾರೆ. ಇತಿಹಾಸವು ಕಸದ ಬುಟ್ಟಿಗೆ ಹಾಕುತ್ತದೆ ಎನ್ನುದಕ್ಕೆ ಇದಕಿಂತ ಸಾಕ್ಷಿ ಬೇಕಿಲ್ಲ. ಚುನಾವಣೆಗಾಗಿ ರಾಜ್ಯದ ಜನ ಕಾಯುತ್ತಿದ್ದು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುವುದರಲ್ಲಿ ಸಂದೇಹವಿಲ್ಲ ಎಂದು ಪ್ರಭಾಕರ ಮ್ಯಾಸನಾಯಕ ಭವಿಷ್ಯ ನುಡಿದಿದ್ದಾರೆ.

