ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಕುರ್ಚಿಗಾಗಿ ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯ ಕಾಂಗ್ರೆಸ್ನ ಪಟ್ಟದ ಆಟ ರಂಗೇರುತ್ತಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರು ಒಂದಲ್ಲೊಂದು ತಂತ್ರ ಪ್ರತಿ ತಂತ್ರವನ್ನು ಕಂಡು ಕಾಣದಂತೆ ಹೆಣೆಯುತ್ತಿದ್ದಾರೆ.
ಕನಕಪುರ ಬಂಡೆ ಬೆಂಬಲಿಗರು ಯಥಾ ಪ್ರಕಾರ, ದೆಹಲಿ ದಂಡಯಾತ್ರೆ ಮುಂದುವರೆಸಿದ್ದಾರೆ. ಡಿಕೆಯ ಎರಡನೇ ಬಣ ರಾಷ್ಟ್ರ ರಾಜಕಾರಣದ ಹೆಡ್ ಕ್ವಾಟ್ರಸ್ನಲ್ಲಿ ತಮ್ಮ ನಾಯಕನ ಪರ ದಾಳ ಉರುಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡ್ಮೂರು ದಿನಗಳಿಂದ ಸಿಎಂ ಬಗ್ಗೆ ಮಾರ್ಮಿಕವಾಗಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಡುವ ರೀತಿಯಲ್ಲೇ ಮಾತನಾಡುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಈಗ ಏಕಾಏಕಿ ವರಸೆ ಬದಲಿಸಿದ್ದಾರೆ.
ಡಿಕೆ ಶಿವಕುಮಾರ್, ದಿಢೀರ್ ಎಂದು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಸಾಫ್ಟ್ ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ದಿಢೀರ್ ಡಿಕೆಶಿ ಸಾಫ್ಟ್ ಆಗಿದ್ಯಾಕೆ ಎನ್ನುವ ಕುತೂಹಲ ಮೂಡಿಸಿದ್ದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.

