ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿ ಗಣತಿ ವರದಿ ಜಾರಿ ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ನಾಳೆ ವರದಿ ಜಾರಿ ಆಗುತ್ತದೆ ಅಂತ ನಿರೀಕ್ಷಿಸಬೇಡಿ ಎಂದು ಸಿದ್ದರಾಮಯ್ಯ ಅವರ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳುವ ಮುಖೇನ ಜಾತಿಗಣತಿ ಸಿದ್ದರಾಮಯ್ಯ ಅವರ ಕುರ್ಚಿ ಉಳಿಸಲು ನಡೆಸಿದ ಮಹಾ ನಾಟಕ ಎಂಬುದು ಬಯಲಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಜಾತಿಗಣತಿಗೆ ತಳಪಾಯ ಹಾಕಿ, ಈಗ ಎರಡನೇ ಅವಧಿ ಮುಗಿಯುತ್ತಿದ್ದಂತೆ 10 ವರ್ಷದ ಹಿಂದಿನ ವರದಿಯನ್ನು ಮುನ್ನೆಲೆಗೆ ತಂದು ಕುರ್ಚಿ ಉಳಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ದೂರಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾತಿಗಣತಿಗೆ ಸಂಬಂಧಿಸಿದಂತೆ ನಡೆಸಿದ ಕ್ಯಾಬಿನೆಟ್ ಚರ್ಚೆ ಸಹ ಅಪೂರ್ಣವಾಗಿದೆ. ಸಂಪುಟ ಸಭೆಯಲ್ಲೇ ಒಕ್ಕಲಿಗ ಸಚಿವರು, ಲಿಂಗಾಯತ ಸಚಿವರು ಹಾಗೂ ಹಿಂದುಳಿದ ವರ್ಗದ ಸಚಿವರ ನಡುವೆಯೇ ದೊಡ್ಡ ಜಟಾಪಟಿ ನಡೆದಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತನ್ನ ಸ್ವಾರ್ಥಕ್ಕಾಗಿ ಮಾಡಿರುವ ಜಾತಿಗಣತಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ಮುಂದಿನ ದಿನಗಳಲ್ಲಿ ನಾಶಪಡಿಸಲಿದೆ ಎಂದು ಬಿಜೆಪಿ ಎಚ್ಚರಿಸಿದೆ.