ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಕಾಶದಲ್ಲಿರುವ ನಕ್ಷತ್ರಗಳನ್ನು ಏಣಿಸಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಸ್ವಯಂ ಘೋಷಿತ ಸ”ಮಜಾವಾದಿ” ಸಿಎಂ ಸಿದ್ದರಾಮಯ್ಯ ಅವರಿಂದ ತುಳಿತಕ್ಕೊಳಗಾದ ದಲಿತ ಹಾಗೂ ಹಿಂದುಳಿದ ಸಮುದಾಯದವರನ್ನು ಲೆಕ್ಕ ಇಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ವೃತ್ತಿ ರಾಜಕಾರಣವಾದರೆ, ಪ್ರವೃತ್ತಿ ದಲಿತ ಹಾಗೂ ಹಿಂದುಳಿದ ಸಮುದಾಯಗಳ ನಾಯಕರನ್ನು ನಾಮಾವಶೇಷ ಮಾಡುವುದು ಹಾಗೂ ಮುಸ್ಲಿಮರನ್ನು ಓಲೈಸುವುದು!! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
1983 ರಿಂದ ಆರಂಭವಾದ ಸಿದ್ದರಾಮಯ್ಯ ಅವರ ಈ ಪ್ರವೃತ್ತಿ ಇದುವರೆಗೂ ನಿಂತಿಲ್ಲ. ಕರ್ನಾಟಕ ರಾಜ್ಯಕ್ಕೆ ಎರೆಡೆರೆಡು ಬಾರಿ ಮುಖ್ಯಮಂತ್ರಿಯಾದರೂ ದಲಿತ ಹಾಗೂ ಹಿಂದುಳಿದ ಸಮುದಾಯಗಳ ನಾಯಕರು ತಮ್ಮ ಸಮಾನಕ್ಕೆ ಬರಬಾರದೆಂಬ ಕಾರಣಕ್ಕೆ, ನಿರಂತರವಾಗಿ ಆ ಸಮುದಾಯಗಳ ನಾಯಕರಿಗೆ ಅವಕಾಶಗಳನ್ನ ತಪ್ಪಿಸಿ, ಮುಸ್ಲಿಮ್ ಸಮುದಾಯದ ನಾಯಕರಿಗೆ ಆ ಅವಕಾಶಗಳನ್ನು ಧಾರೆ ಎರೆಯುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
2007 ರಲ್ಲಿ ಕಾಂಗ್ರೆಸ್ ಗೆ ಬಂದ ಸಿದ್ದರಾಮಯ್ಯ ಮೊದಲು ಮಾಡಿದ ಕೆಲಸವೆಂದರೆ ಅದು ತಮಗೆ ಪ್ರತಿಸ್ಪರ್ಧಿಯಾಗಲಿರುವ ದಲಿತ ಹಾಗೂ ಹಿಂದುಳಿದ ನಾಯಕರ ರಾಜಕಾರಣವನ್ನು ಶಾಶ್ವತವಾಗಿ ಮುಗಿಸಲು ಷಡ್ಯಂತ್ರ ಮಾಡಿದ್ದು. 2008 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದನ್ನು ಸಹಿಸದ ಸಿದ್ದರಾಮಯ್ಯ ಅವರು ತಮ್ಮ ವಂಧಿಮಾಗದರಿಂದ ಖರ್ಗೆ ತುಂಬಾ ವೀಕ್ ಪ್ರತಿಪಕ್ಷ ನಾಯಕ ಎಂಬುದನ್ನು ಹುಯಿಲೆಬ್ಬಿಸಿದರು.
2009ರಲ್ಲಿ ಖರ್ಗೆ ಅವರಿಗೆ ಮನಸ್ಸಿಲ್ಲದಿದ್ದರೂ, ಅವರನ್ನು ಒತ್ತಾಯ ಮಾಡಿ ಲೋಕಸಭೆಗೆ ಕಳುಹಿಸಲು ಸಿದ್ದರಾಮಯ್ಯ ಅವರ ಅತಿಯಾದ ಸ್ವಾರ್ಥವೇ ಕಾರಣ ಎಂಬುದನ್ನು ಅಂದಿನ ವಿಧಾನಸೌಧವೇ ಮಾತನಾಡಿತ್ತು ಎಂದು ಬಿಜೆಪಿ ಆರೋಪಿಸಿದೆ.
2013 ರಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನ ಪ್ರಬಲ ಹಿಂದುಳಿದ ವರ್ಗಗಳ ನಾಯಕರಾಗಿದ್ದ ಕೆ.ಆರ್.ಪುರಂನ ಎ. ಕೃಷ್ಣಪ್ಪ ಅವರಿಗೆ ಟಿಕೇಟ್ ತಪ್ಪಿಸಿ ಅವಮಾನಿಸಲಾಯ್ತು. ಒಂದು ವೇಳೆ ಕೃಷ್ಣಪ್ಪ ಅವರು ವಿಧಾನಸಭೆಗೆ ಆಯ್ಕೆಯಾದರೆ ತಮ್ಮ ನಾಯಕತ್ವಕ್ಕೆ ಕಠಿಣ ಪ್ರತಿಸ್ಪರ್ಧಿಯಾಗಬಲ್ಲರು ಎಂಬ ಸಿದ್ದರಾಮಯ್ಯ ಅವರ ದುರಾಲೋಚನೆಯೇ ಕೃಷ್ಣಪ್ಪ ಅವರಿಗೆ ಟಿಕೇಟ್ ತಪ್ಪಲು ಕಾರಣ!! ಎಂದು ಬಿಜೆಪಿ ಆರೋಪ ಮಾಡಿದೆ.
ಇನ್ನು 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಅಂದಿನ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದ ಡಾ.ಪರಮೇಶ್ವರ ಅವರನ್ನು ಸೋಲಿಸಲು ತಮ್ಮ ಶಿಷ್ಯರಿಗೆಲ್ಲಾ ಕೊರಟಗೆರೆಯಲ್ಲಿ ಮೊಕ್ಕಾಂ ಹೂಡಿ ಎಂದು ಆಜ್ಞೆ ಮಾಡಿದ್ದರು. ವಿಪರ್ಯಾಸ ನೋಡಿ ಅಂದು ಕೊರಟಗೆರೆಯಲ್ಲಿ ಉಳಿದು ಪರಮೇಶ್ವರ್ ಅವರ ಸೋಲಿಗೆ ಕಾರಣವಾಗಿದ್ದ ಬೈರತಿ ಸುರೇಶ್ ಇಂದು ಮಂತ್ರಿ!!
ಉತ್ತಮ ಸಂಸದೀಯ ಪಟು ಎಂದು ಗುರುತಿಸಲಾಗಿದ್ದ ಸಮಾಜವಾದಿ ನಾಡಿನ ಹಿರಿಯ ಹಿಂದುಳಿದ ವರ್ಗಗಳ ನಾಯಕ ಕಾಗೋಡು ತಿಮ್ಮಪ್ಪನವರಿಗೆ ಮಂತ್ರಿಗಿರಿ ತಪ್ಪಿಸುವ ಸಲುವಾಗಿ ಅವರನ್ನು ಸ್ಪೀಕರ್ ಮಾಡಿ ಎಂದು ಹೈಕಮಾಂಡ್ ಕಿವಿ ಊದಿದ್ದು ಸಹ ಇದೇ ಸಿದ್ದರಾಮಯ್ಯ ಅವರು!! ಮುಂದೆ ಕಾಂಗ್ರೆಸ್ ಹೈಕಮಾಂಡ್ ತನ್ನ ತಪ್ಪನ್ನು ಸರಿಪಡಿಸಿಕೊಂಡು ಕಾಗೋಡು ತಿಮ್ಮಪ್ಪನವರನ್ನು ಮಂತ್ರಿ ಮಾಡಿದ್ದು ಇತಿಹಾಸ ಎಂದು ಬಿಜೆಪಿ ತಿಳಿಸಿದೆ.
ಸಿದ್ದರಾಮಯ್ಯ ಅವರ ದಲಿತ ದ್ವೇ಼ಷ 2017ರಲ್ಲಿಯೂ ಮುಂದುವರೆದಿದ್ದು ವಿಪರ್ಯಾಸ!! ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ತಮ್ಮ ಗೆಲುವಿಗೆ ನಿರಂತರವಾಗಿ ಶ್ರಮಿಸುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಅವಮಾನಿಸಿ ಮಂತ್ರಿಗಿರಿಯಿಂದ ವಜಾಗೊಳಿಸಿದರು. ಇದು ಸಿಎಂ ಸಿದ್ದರಾಮಯ್ಯ ಅವರು ತಮಗೆ ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವ ಪರಿ!!
2023 ರಲ್ಲಿ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್ ನ ಹಿರಿಯ ಹಿಂದುಳಿದ ವರ್ಗಗಳ ನಾಯಕ ಬಿ.ಕೆ ಹರಿಪ್ರಸಾದ್ ಅವರು ಸಹಜವಾಗಿ ಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದರು. ಆದರೆ ಬಿ.ಕೆ.ಹರಿಪ್ರಸಾದ್ ಮಂತ್ರಿಯಾದರೆ ತಾವು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಬ್ಲಾಕ್ ಮೇಲ್ ಮಾಡಿದ್ದು ಅವರ ಹಿಂದುಳಿದ ವರ್ಗಗಳ ವಿರೋಧಿ ಮನಸ್ಥಿತಿಗೆ ಸಾಕ್ಷಿ!! ಎಂದು ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದೆ.
ಮೂಲ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್‌ರನ್ನು ಬಿಟ್ಟು, 2018 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ವಲಸಿಗ ಕಾಂಗ್ರೆಸ್ಸಿಗ ಜಮೀರ್ ಅಹಮದ್‌ರನ್ನು ಮೊದಲ ಕಂತಿನಲ್ಲೆ ಮಂತ್ರಿ ಮಾಡಲು “ಸಿದ್ದ”ರಿದ್ದವರು ಸಿದ್ದರಾಮಯ್ಯ ಅವರು!! ಒಬಿಸಿ ಸಮುದಾಯದವರಿಗೆ ಅವಕಾಶವನ್ನು ತಪ್ಪಿಸಿ ಮುಸಲ್ಮಾನರಿಗೆ ಧಾರೆ ಎರೆಯುವುದು ಸಿದ್ದರಾಮಯ್ಯ ಅವರ ಅಸಲಿ ಸಾಮಾಜಿಕ ನ್ಯಾಯ!!
ಇನ್ನು ಕಾಂಗ್ರೆಸ್ ನಲ್ಲಿ ಪಕ್ಷಕ್ಕೆ ತ್ಯಾಗ ಮಾಡಿದ್ದ ಅನೇಕ ಹಿಂದುಳಿದ ಹಾಗೂ ದಲಿತ ಸಮುದಾಯಗಳ ನಾಯಕರಿದ್ದರು. ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಬಹುದಿತ್ತು. ಆದರೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ.ಎಸ್.ಯತೀಂದ್ರ ಅವರನ್ನು ಪರಿಷತ್ ಗೆ ನಾಮ ನಿರ್ದೇಶನ ಮಾಡಿದರೆ ಹೊರತು, ಮತ್ತಾವ ಹಿಂದುಳಿದ ಅಥವಾ ದಲಿತ ನಾಯಕರತ್ತ ತಲೆಯೆತ್ತಿ ಸಹ ನೋಡಲಿಲ್ಲ!!
ಈಗ ಅಧಿಕಾರ ಹಸ್ತಾಂತರ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ರಾಜಕಾರಣ ಜೀವನದುದ್ದಕ್ಕೂ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಮಾಡಿದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಒಂದು ದಾರಿ ಇದೆ. ತಮ್ಮ ಸಿಎಂ ಒಬ್ಬ ಹಿಂದುಳಿದ ಅಥವಾ ದಲಿತ ಸಮುದಾಯದ ನಾಯಕರಿಗೆ ಬಿಟ್ಟು ಕೊಡಲಿ ಎಂದು ಬಿಜೆಪಿ ತಾಕೀತು ಮಾಡಿದೆ.