ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಇನ್ನಿಲ್ಲ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ರಾಯಚೂರು:
ಕಲಬುರಗಿ ವಿಭಾಗದ ಪ್ರಸಿದ್ಧ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (49) ಹಠಾತ್ ಎದೆನೋವಿನಿಂದ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಜಿಲ್ಲೆಯ ತಿಂಥಿಣಿ ಬ್ರಿಡ್ಜ್ ಬಳಿಯ ಕನಕಗುರು ಪೀಠದ ಪೀಠಾಧಿಪತಿಗಳಾಗಿದ್ದ ಸ್ವಾಮೀಜಿಗಳಿಗೆ ಗುರುವಾರ ಬೆಳಗಿನ ಜಾವ 3-40ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಲಿಂಗಸೂಗೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಸ್ವಾಮೀಜಿ ದೈವಾಧೀನರಾದರು. ಸ್ವಾಮೀಜಿಗಳ ನಿಧನದ ಮಾಹಿತಿಯನ್ನು ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಖಚಿತಪಡಿಸಿದ್ದಾರೆ.

- Advertisement - 

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುಗ್ರಾಮ ಕಲಮರಹಳ್ಳಿಯ ಸ್ವಾಮೀಜಿಯವರು, ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರರಾಗಿ ಜನಿಸಿದ್ದರು. ಮೋಹನ್ ಇವರ ಮೊದಲ ಹೆಸರು. ಆಧ್ಯಾತ್ಮಿಕ ಹಸಿವಿನಿಂದ 18ನೇ ವಯಸ್ಸಿಗೆ ಮನೆ ಬಿಟ್ಟು ಸಂಚಾರ ಆರಂಭಿಸಿದ್ದರು.
ಮೊದಲು ಜೈನ
, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಭಾವಕ್ಕೆ ಒಳಗಾಗಿದ್ದ ಸ್ವಾಮೀಜಿ, ಶರಣ ಸಾಹಿತ್ಯದ ಜೊತೆಗೆ ಎಲ್ಲ ಧರ್ಮಗಳ ಅಧ್ಯಯನ ಮಾಡಿದ್ದರು.

ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ಅಧ್ಯಯನ ಮಾಡಿ, ಆ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ವಾಸ್ತವ್ಯವಿದ್ದರು.
2011ರಲ್ಲಿ ಕನಕಗುರು ಪೀಠಕ್ಕೆ ಬಂದ ಸಿದ್ದರಾಮನಂದ ಸ್ವಾಮೀಜಿ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಬ್ರೀಡ್ಜ್ ಬಳಿ ಕಲಬುರಗಿ ವಿಭಾಗದ ಕನಕ ಗುರು ಪೀಠ ಶುರು ಮಾಡಿದರು.

- Advertisement - 

ಪ್ರತಿ ವರ್ಷ ಜನವರಿ 12,13,14 ಹಾಲುಮತ ಸಂಸ್ಕೃತಿ ವೈಭವ ಆಚರಣೆ ಮಾಡುತ್ತಿದ್ದರು. ಈ ವೈಭವ ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ರಾಜ್ಯದ ಬಹುತೇಕ ಗಣ್ಯರು ಆಗಮಿಸುತ್ತಿದ್ದರು. ಕನಕ ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುವರೆಗೂ ಶಿಕ್ಷಣ ಪ್ರಾರಂಭಿಸಿ, ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು.

ಬಾಗಲಕೋಟೆ ಜಿಲ್ಲೆಯ ಗುಡೂರಿನಲ್ಲಿ ಪದವಿ ಕಾಲೇಜು, ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು, ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲೂಕಿನ ಬಾದಿಮನಾಳದಲ್ಲಿ ಶಾಖಾಮಠ ಸ್ಥಾಪನೆ, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಆಯೋಜಿಸುತ್ತಿದ್ದರು.

ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಪ್ರತಿ ವರ್ಷ ಭಾಸ್ಕರ, ಕನಕರತ್ನ, ಸಿದ್ಧಶ್ರೀ ಪ್ರಶಸ್ತಿ ನೀಡಲಾಗುತ್ತಿತ್ತು. ಕಳೆದ 12ರಿಂದ 14 ರವರೆಗೆ ಹಾಲುಮತ ಉತ್ಸವ ಆಯೋಜಿಸಿದ್ದರು. ಇದರೊಂದಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು.

ತಿಂಥಿಣಿಯಲ್ಲಿ ಹಾಲುಮತದ ಪದ್ಧತಿಯಂತೆ ಸ್ವಾಮೀಜಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ, ಗಣ್ಯರಿಗೆ ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಲವು ಗಣ್ಯರು ಬರುವ ಸಾಧ್ಯತೆಯಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಸಂತಾಪ:
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟುಮಾಡಿದೆ.
ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ
, ಶ್ರದ್ಧೆ ಹೊಂದಿದ್ದ ಶ್ರೀಗಳ‌ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ.

 ಶ್ರೀಗಳ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ, ಶ್ರೀ ಮಠದ ಭಕ್ತಾದಿಗಳು ಹಾಗೂ ಅಪಾರ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕುಮಾರಸ್ವಾಮಿ ಸಂತಾಪ:
ರಾಯಚೂರಿನ ತಿಂಥಿಣಿ ಬ್ರಿಡ್ಜ್ ಸಮೀಪದ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಅವರು ನಮ್ಮನ್ನು ಅಗಲಿದ ಸುದ್ದಿ ಕೇಳಿ ಬಹಳ ದುಃಖವಾಯಿತು.
ಸಮಾಜ ಸುಧಾರಣೆ ಭಾಗವಾಗಿ ಬಡಮಕ್ಕಳಿಗೆ ಉಚಿತ ವಿದ್ಯೆ
, ದಾಸೋಹದ ವ್ಯವಸ್ಥೆ ಸೇರಿ ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿ ಅನೇಕ ಜನೋಪಕಾರಿ ಕಾರ್ಯಗಳನ್ನು ಪರಮಪೂಜ್ಯರು ಕೈಗೊಂಡಿದ್ದರು.

ಸ್ವಾಮೀಜಿಯವರ ನಿಧನ ನಾಡಿಗೆ ಬಹುದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಭಕ್ತರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಾರ್ಥಿಸಿದ್ದಾರೆ.

ಡಿಸಿಎಂ ಶಿವಕುಮಾರ್ ಸಂತಾಪ:
ದೇವದುರ್ಗ ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಅವರು ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಸ್ವಾಮೀಜಿಯವರು ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ
, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಸೇರಿದಂತೆ ಸದಾ ಜನಪರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದೀಗ ಸ್ವಾಮೀಜಿಯವರು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಭಕ್ತರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಾರ್ಥಿಸಿದ್ದಾರೆ.

 ವಿಪಕ್ಷ ನಾಯಕ ಅಶೋಕ್ ಸಂತಾಪ:
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶಾಖಾ ಮಠ
, ತಿಂಥಿಣಿ ಬ್ರಿಜ್ಡ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ದುಃಖ ಉಂಟು ಮಾಡಿದೆ.

ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಅನೇಕ ಸಮಾಜಮುಖಿ ಸೇವಾಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ವಿಜಯೇಂದ್ರ ಸಂತಾಪ:
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್ ಕಲ್ಬುರ್ಗಿ ವಿಭಾಗೀಯ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ.

ಆಧ್ಯಾತ್ಮದ ಜೊತೆಗೆ ಶಿಕ್ಷಣ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ್ದರು. ಅವರ ಅಗಲಿಕೆಯಿಂದ ನಾಡಿನ ಧಾರ್ಮಿಕ, ಸಾಮಾಜಿಕ, ಸಾಂಕೃತಿಕ ವಲಯಕ್ಕೆ ದೊಡ್ಡ ನಷ್ಟವಾಗಿದೆ. ಭಗವಂತನು ಪೂಜ್ಯರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ, ಅವರ ಅಸಂಖ್ಯಾತ ಭಕ್ತರಿಗೆ ಮತ್ತು ಶಿಷ್ಯವರ್ಗಕ್ಕೆ ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಾರ್ಥಿಸಿದ್ದಾರೆ.

 

Share This Article
error: Content is protected !!
";