ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಅನ್ಯಾಯ ಆಗದ ರೀತಿ ಒಳಮೀಸಲಾತಿ ಜಾರಿಗೆ ಮುಂದಾಗಿದ್ದು, ದೇಶದಲ್ಲಿಯೇ ಜಾತಿಗಣತಿ ಕಾರ್ಯ ಕೈಗೊಂಡ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬಣ್ಣಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 30 ವರ್ಷ ಹೋರಾಟದ ಫಲ ಒಳಮೀಸಲಾತಿ ಜಾರಿಗೆ ಇದ್ದ ಅಡೆತಡೆಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಜೊತೆಗೆ ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಅದರಂತೆ ಈಗ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.
ಈಗಾಗಲೇ ನಾನು ಸೇರಿದಂತೆ ಅನೇಕ ಹೋರಾಟಗಾರರು, ರಾಜಕಾರಣಿಗಳು ರಾಜ್ಯಾದ್ಯಂತ ಸುತ್ತಾಟ ನಡೆಸಿ, ಮಾದಿಗ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದು ಶಾಲಾ-ಕಾಲೇಜ್ ಸೇರಿ ಯಾವುದೇ ರೀತಿ ದಾಖಲಾತಿ ಇದ್ದರೂ ಮೂಲ ಜಾತಿ 061 ಮಾದಿಗ ಎಂದು ಬರೆಯಿಸುವಂತೆ ಹೇಳಲಾಗಿದೆ. ಅದರಂತೆ ನೌಕರ ವರ್ಗ, ಚಿಂತಕರು ಸೇರಿ ಅನೇಕ ಕ್ಷೇತ್ರದ ವ್ಯಕ್ತಿಗಳು ಹಟ್ಟಿ, ಕಾಲೋನಿ, ಬಡಾವಣೆ, ನಗರ, ಪಟ್ಟಣಗಳಲ್ಲಿ ಜಾಗೃತಿ ಕಾರ್ಯ ಕೈಗೊಂಡಿದ್ದಾರೆ ಎಂದು ಹೇಳಿದರು.
ಮಾದಿಗ ಸಮುದಾಯದಲ್ಲಿಯೇ ಅಗ್ರಗಣ್ಯರೆಂದೇ ಗುರುತಿಸಿಕೊಂಡಿರುವ ನಿಮ್ಮನ್ನು ಎರಡು ವರ್ಷವಾದರೂ ಎಂಎಲ್ಸಿ, ಸಚಿವರನ್ನಾಗಿ ಮಾಡದೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ನಿರ್ಲಕ್ಷ್ಯ ಮಾಡಿದೆ ಎಂದೇನಿಸುತ್ತಿಲ್ಲವೆ ಎಂಬ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದ ಆಂಜನೇಯ, ನಿಮ್ಮನ್ನು ಸೋಲಿಸಲು ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ವರಿಷ್ಠರು ಚುನಾವಣೆಗೆ ಸ್ಪರ್ಧೆ ಮಾಡಬೇಡಿ, ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರಕ್ಕೆ ಸಮಯ ಮೀಸಲಿಡಿ, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವರನ್ನಾಗಿಸಿಕೊಳ್ಳಲಾಗುವುದು ಎಂದು ಸೂಚಿಸಿದ್ದರು.
ಆದರೆ ಹೋರಾಟದಿಂದಲೇ ಮೇಲೆ ಬಂದ ನನಗೆ ಚುನಾವಣೆಯಲ್ಲಿ ಗೆದ್ದೇ ಮಂತ್ರಿ ಆಗಬೇಕು ಎಂಬ ಮಹಾದಾಸೆ ಇತ್ತು. ಜೊತೆಗೆ ಗೆದ್ದೇ ಗೆಲ್ಲುತ್ತೇನೆ, ಹೊಳಲ್ಕೆರೆ ಕ್ಷೇತ್ರದ ಜನ ಕೈಬಿಡುವುದಿಲ್ಲವೆಂಬ ಭರವಸೆ ಹೆಚ್ಚು ಇತ್ತು. ಆದರೆ, ವರಿಷ್ಠರ ಮಾತು ಕೇಳದೆ ಸ್ಪರ್ಧೆ ಮಾಡಿ ಸೋತಿದ್ದೇನೆ. ಈಗ ನಾನು ಹೇಗೆ ಎಂಎಲ್ಸಿ, ಸಚಿವ ಸ್ಥಾನ ಕೊಡಿ ಎಂದು ಕೇಳಲು ಸಾಧ್ಯ ನೀವೇ ಎಂದು ಮರು ಪ್ರಶ್ನೇ ಹಾಕಿದರು.
ಈಗ ನನ್ನ ಮುಂದಿರುವುದು ಮಾದಿಗರು ಸೇರಿ ಪರಿಶಿಷ್ಟ ಗುಂಪಿನಲ್ಲಿರುವ ಎಲ್ಲರಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಆಗಬೇಕೆಂಬುದು. ಈ ಕಾರಣಕ್ಕೆ ಸಚಿವ ಸ್ಥಾನ ನನಗೆ ಬೇಕಿಲ್ಲ. ಒಳಮೀಸಲಾತಿ ಜಾರಿಗೊಂಡರೇ ಅದೇ ನನ್ನ ಪಾಲಿಗೆ ಬಹುದೊಡ್ಡ ಸ್ಥಾನಮಾನ ಎಂದರು. ಸಿದ್ದರಾಮಯ್ಯ ಅವರನ್ನು ದೇಶ ಕಂಡ ಅಪರೂಪದ ಜ್ಞಾನಿ ಅಂಬೇಡ್ಕರ್ ಅವರಿಗೆ ಹೊಲಿಕೆ ಮಾಡಿರುವುದು ಎಷ್ಟು ಸರಿ ಎಂಬ ಪತ್ರಕರ್ತರ ಪ್ರಶ್ನೇಗೆ ಉತ್ತರಿಸಿದ ಆಂಜನೇಯ, ಅಂಬೇಡ್ಕರ್ ನೊಂದ ಜನ ಆಶಾಕಿರಣ. ಸಂವಿಧಾನ ರಚಿಸುವ ಮೂಲಕ ನಮಗೆ ಅಂಬೇಡ್ಕರ್ ಮೀಸಲಾತಿ ನೀಡಿದರು. ಅವರಂತೆಯೇ ಅಸ್ಪೃಶ್ಯರು, ಅಶಕ್ತ ಜನರ ಬದುಕು ಉತ್ತಮ ಪಡಿಸಲು ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿಯೇ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಂತಹ ಕಾರ್ಯ ಮಾಡಿದ ದೇಶದಲ್ಲಿ ಒಬ್ಬ ರಾಜಕಾರಣಿ ಹೆಸರು ಹೇಳಿ ನೋಡೋಣ. ಜೊತೆಗೆ ಸಣ್ಣ ಕಾನೂನು ತೊಡಕು ಆಗದ ರೀತಿ ಒಳಮೀಸಲಾತಿ ಜಾರಿಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಹಸಿದ ಹೊಟ್ಟೆಗೆ ಅನ್ನ, ಬಡ ಮಕ್ಕಳಿಗೆ ಬಟ್ಟೆ, ಊಟ, ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲು ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಈ ಕಾರಣಕ್ಕೆ ಕೊಪ್ಪಳದಲ್ಲಿ ನಮ್ಮ ಪಾಲಿಗೆ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್ ಎಂದು ಹೇಳಿದ್ದೇನೆ. ಇದರಲ್ಲಿ ಹೊಗಳಿಕೆ ಏನು ಬಂತು, ಯಾರಿಗೆ ಅಪಮಾನ ಆಗಿದೆ ಹೇಳಿ ಎಂದರು.
ಅಂಬೇಡ್ಕರ್, ಬಾಬುಜಗಜೀವನ್ ರಾಂ ರೀತಿಯಲ್ಲಿಯೇ ಶೋಷಿತ ವರ್ಗದ ಜನರ ಏಳ್ಗಿಗೆ ಸಿದ್ದರಾಮಯ್ಯ ತಮ್ಮ ಬದ್ಧತೆ ಪ್ರದರ್ಶಿಸುತ್ತಿದ್ದಾರೆ. ಅನೇಕ ವಿರೋಧ, ಷಡ್ಯಂತ್ರಗಳನ್ನು ಲೆಕ್ಕಿಸದೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಜನರ ಪ್ರಗತಿಗಾಗಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಆದ್ದರಿಂದಲೇ ಅವರನ್ನು ಅಂಬೇಡ್ಕರ್ ಎಂದು ಕರೆಯಲಾಗಿದೆ ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದ ತಕ್ಷಣ ಫಲ ಪಡೆದ ವ್ಯಕ್ತಿಯಲ್ಲಿ ಕೃತಜ್ಞತೆ ಇರಬೇಕು. ಅದೇ ರೀತಿ ನಮ್ಮಲ್ಲೂ ಇದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಅವರು ನಮ್ಮ ಪಾಲಿನ ಅಂಬೇಡ್ಕರ್ ಎಂದು ಹೇಳಿದ್ದೇನೆ. ಇದನ್ನು ಸಣ್ಣತನದ ವ್ಯಕ್ತಿಗಳ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಬೇಡಜಂಗಮರು ನಾವು ಎಂದು ವೀರಶೈವ ಲಿಂಗಾಯಿತರು ಸುಳ್ಳು ಬರೆಸುತ್ತಿರುವುದು, ಪ್ರಮಾಣ ಪತ್ರ ಪಡೆಯುತ್ತಿರುವ ವಿರುದ್ಧ ನಾನು ನೂರಾರು ಬಾರಿ ಖಂಡಿಸಿದ್ದೇನೆ. ಈಗ ನಮ್ಮ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಹೊಸಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದು ನಮ್ಮಂತಹವರ ನಡೆಗೆ ಆನೆಬಲ ಬಂದಂತಾಗಿದೆ ಎಂದರು.
ಸರ್ಕಾರ ಮತ್ತು ಪಕ್ಷಕ್ಕೂ ಈ ಸಂಬಂಧ ಅವರು ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಎಸ್ಸಿ ಮೀಸಲಾತಿ ಕದಿಯುವ ಯತ್ನಕ್ಕೆ ಅವಕಾಶ ನೀಡಬಾರದು. ಬೇಡಜಂಗಮರು ನಾವೆಂದು ಸುಳ್ಳು ಬರೆಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಹೇಳಿರುವುದು ಸ್ವಾಗತರ್ಹ ಎಂದು ಹೇಳಿದರು.