ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಗಂದೂರು ಸೇತುವೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಶಕ್ತಿ ಯೋಜನೆಯ 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸಾಗರ ತಾಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರ ಬರೆಯಲಾಗಿತ್ತು.
ಕೇಂದ್ರ ಸಚಿವರು ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರು. ಹೀಗಿದ್ದರೂ ಸಹ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತರದೇ ಕಾರ್ಯಕ್ರಮ ಆಯೋಜಿಸಿದ್ದಾರೆ. ಪೂರ್ವನಿಯೋಜಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಕಾರ್ಯಕ್ರಮದಲ್ಲಿ ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟ ಪ್ರಾರಂಭಿಸಿರುವುದು ಕೇಂದ್ರ ಸರ್ಕಾರ.
ಇಲ್ಲಿ ಶಿಷ್ಟಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಟಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರಿಗಾಗಲಿ, ಸ್ಥಳೀಯ ಶಾಸಕರಿಗಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು.
ಸಿಎಂಗೆ ಮೊದಲು ತಿಳಿಸಬೇಕು:
ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರವಾಗಿ ಕೇಂದ್ರ ಸರ್ಕಾರ ಸಿಎಂಗೆ ಮೊದಲು ತಿಳಿಸಬೇಕಿತ್ತು. ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಸೋಮವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಎಂಗೆ ಮೊದಲು ತಿಳಿಸಬೇಕು. ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಂಸದರು ಮನವಿ ಮಾಡಿದ್ದಾರೆ. ಅದಕ್ಕಾಗಿ ಸಿಎಂ ಪತ್ರ ಕೂಡಾ ಬರೆದಿದ್ದಾರೆ.
ಇದೊಂದು ದೊಡ್ಡ ಕಾರ್ಯಕ್ರಮ. ಒಂದು ತಿಂಗಳು ಮುಂಚೆಯೇ ಹೇಳಬೇಕು. 2,000 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ನಮ್ಮ ನಿರಾವರಿ ಇಲಾಖೆಯಿಂದಲೂ ಖರ್ಚು ಮಾಡಿದ್ದೇವೆ. ಇದಕ್ಕೆ ಹೋಗಲೇ ಬೇಕಾಗಿತ್ತು ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದರು.
ಕೇಂದ್ರ ಸರ್ಕಾರದವರು ಮುಂಚಿತವಾಗಿ ಸೇತುವೆ ಉದ್ಘಾಟನೆಯ ಮಾಹಿತಿ ತಿಳಿಸಿದ್ದರೆ ನಾವು ಹೋಗುತ್ತಿದ್ದೆವು ಎಂದು ಡಿಸಿಎಂ ಹೇಳಿದರು.