ಕಾರು ಬಾಂಬ್​ ಸ್ಫೋಟದಲ್ಲಿ ಮಹತ್ವದ ಮತ್ತು ಆಘಾತಕಾರಿ ಅಂಶ ಬೆಳಕಿಗೆ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಶ್ರೀನಗರ:
ದೆಹಲಿಯ ಕೆಂಪುಕೋಟೆ ಬಳಿ ಕಳೆದ ವರ್ಷ 2025ರ ನವೆಂಬರ್ 10ರಂದು ನಡೆದ ಕಾರು ಬಾಂಬ್​ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಮತ್ತು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬಂಧಿಸಲ್ಪಟ್ಟ ವೈದ್ಯರು 2016ರಿಂದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಜಮ್ಮು-ಕಾಶ್ಮೀರ ಸೇರಿ ಹಲವೆಡೆ ದಾಳಿ ನಡೆಸಲು
ಅನ್ಸಾರ್​ ಇಂಟೆರಿಮ್​ಎಂಬ ಉಗ್ರ ಸಂಘಟನೆ ರಚಿಸಿಕೊಂಡಿದ್ದು ತನಿಖೆಯಿಂದ ಪತ್ತೆಯಾಗಿದೆ.

ಜಮ್ಮು-ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಂಟಿಯಾಗಿ ವೈಟ್​ ಕಾಲರ್​ ಉಗ್ರವಾದ ತನಿಖೆ ನಡೆಸುತ್ತಿದ್ದಾರೆ. 2025ರ ನವೆಂಬರ್ 10ರಂದು ಕೆಂಪು ಕೋಟೆ ಬಳಿ ಕಾರು ಸ್ಫೋಟಿಸಿ ಹನ್ನೆರಡು ಜನರ ಸಾವಿಗೆ ಕಾರಣವಾದ ಡಾ.ಉಮರ್ ಉನ್ ನಬಿ 2016 ಮತ್ತು 2018ರಲ್ಲಿ ಈ ಉಗ್ರ ಗುಂಪನ್ನು ಸೇರಲು ವಿಫಲ ಪ್ರಯತ್ನ ನಡೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

- Advertisement - 

ಹುದ್ದೆ ಹಂಚಿಕೆ: ಮತಾಂದ ವೈದ್ಯರಾದ ಮುಜಾಮಿಲ್ ಗ್ಯಾನಿ, ಅದೀಲ್ ರಾಥರ್, ಈತನ ಸಹೋದರ ಮುಝಾಫರ್ ರಾಥರ್, ಮೌಲ್ವಿ ಇರ್ಫಾನ್, ಖಾರಿ ಆಮಿರ್, ತುಫೈಲ್ ಗಾಜಿ ಮತ್ತು ಕಾರು ಸ್ಫೋಟದಲ್ಲಿ ಮೃತಪಟ್ಟ ಉಮರ್ ಉನ್ ನಬಿ 2022ರ ಏಪ್ರಿಲ್​​ನಲ್ಲಿ ಶ್ರೀನಗರದಲ್ಲಿನ ಈದ್ಗಾದಲ್ಲಿ ಭೇಟಿಯಾಗಿ ಸಭೆ ನಡೆಸಿದ್ದ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

ಅನ್ಸಾರ್​ ಇಂಟೆರಿಮ್ ಎಂಬ ಭಯೋತ್ಪಾದಕ ಸಂಘಟನೆಯನ್ನು ಈ ವೇಳೆ ರಚಿಸಲು ನಿರ್ಧರಿಸಿದರು. ಅದೀಲ್ ರಾಥರ್​ ಮುಖ್ಯಸ್ಥ, ಮೌಲ್ವಿ ಇರ್ಫಾನ್ ಉಪ ಮುಖ್ಯಸ್ಥ, ಮುಜಾಮಿಲ್​ ಗ್ಯಾನಿಯನ್ನು ಖಜಾಂಚಿಯಾಗಿ ಹೆಸರಿಸಲಾಗಿದೆ. ಈ ಗುಂಪು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾ ಜತೆ ಸಂಬಂಧ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement - 

ಜಮ್ಮು-ಕಾಶ್ಮೀರದ ಉಗ್ರರೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ನಾವೇ ಹೊಸ ಸಂಘಟನೆ ರಚಿಸಿಕೊಳ್ಳಬೇಕಾಯಿತು. ಬಳಿಕ ನಮ್ಮಲ್ಲಿಯೇ ಹುದ್ದೆಗಳನ್ನು ಆರಿಸಿಕೊಂಡು, ಕಾರ್ಯಾಚರಣೆಯ ಹೊಣೆ ನೀಡಲಾಗಿತ್ತು ಎಂದು ಬಂಧಿತ ವೈದ್ಯರು ಮತ್ತು ಮೌಲ್ವಿ ವಿಚಾರಣೆ ವೇಳೆ ತಿಳಿಸಿದ್ದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟಿರುವ ಉಮರ್ ಗುಂಪಿನ ಸಂಯೋಜಕನಾಗಿದ್ದ. ಗ್ಯಾನಿಯೊಂದಿಗೆ ಹಣಕಾಸು ಮತ್ತು ಸ್ಫೋಟಕ ಖರೀದಿ ನಡೆಸುತ್ತಿದ್ದ. 2023ರಲ್ಲಿ ಹರಿಯಾಣದ ಸೊಹ್ನಾ ಮತ್ತು ನುಹ್​​ನಲ್ಲಿ ಸ್ಫೋಟಕ ತಯಾರಿಗೆ ರಸಗೊಬ್ಬರ ಖರೀದಿಸಲು ನಿರ್ಧರಿಸಲಾಯಿತು. ಅದರಂತೆ, ಫರಿದಾಬಾದ್​​ನಲ್ಲಿ ಎನ್ ಪಿಕೆ (ಪೊಟ್ಯಾಸಿಯಮ್ ನೈಟ್ರೇಟ್) ಅನ್ನು ರಸಗೊಬ್ಬರ ಅಂಗಡಿಯಲ್ಲಿ ಖರೀದಿಸಲಾಯಿತು ಎಂದು ಉಗ್ರರು ತಿಳಿಸಿದ್ದಾರೆ.

ವಿಡಿಯೋ ನೋಡಿ ಬಾಂಬ್​ ತಯಾರಿ:
ಬಂಧಿತ ಉಗ್ರರಾದ ವೈದ್ಯರು ವಿಚಾರಣೆಯ ವೇಳೆ ತಿಳಿಸಿದಂತೆ
, ಮೃತ ಉಮರ್ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ಆನ್‌ಲೈನ್ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಅತ್ಯಂತ ಮಾರಕ ಸ್ಫೋಟಕಗಳಲ್ಲಿ ಒಂದಾದ ಟ್ರಯಾಸೆಟೋನ್ ಟ್ರೈಪೆರಾಕ್ಸೈಡ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದ. ಇತ್ತ, ಅದೀಲ್ ತಮ್ಮ ಗುಂಪಿಗೆ ಸದಸ್ಯರನ್ನು ನೇಮಿಸಿಕೊಳ್ಳುತ್ತಿದ್ದ. ದಕ್ಷಿಣ ಕಾಶ್ಮೀರದ ಡ್ಯಾನಿಶ್, ಅಲಿಯಾಸ್ ಜಾಸಿರ್ ಎಂಬ ಇಬ್ಬರನ್ನು ಕರೆತಂದಿದ್ದ.

ಡ್ಯಾನಿಶ್​​ನನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಾಡಿಗೆ ವಸತಿಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಉಮರ್ ಮತ್ತು ಗ್ಯಾನಿ ಟಿಎಟಿಪಿ ಸ್ಫೋಟಕ ವಸ್ತುಗಳನ್ನು ತಯಾರಿಸುವುದನ್ನು ನೋಡಿದರು.

ನಂತರ, ಡ್ಯಾನಿಶ್‌ನನ್ನು ಆತ್ಮಹತ್ಯಾ ಬಾಂಬರ್​ ಆಗಿ ದಾಳಿ ನಡೆಸುವಂತೆ ಉಮರ್ ಕೇಳಿಕೊಂಡ. ಆದರೆ ಕೊನೆಯ ಕ್ಷಣದಲ್ಲಿ ಆತ ಇದರಿಂದ ಹಿಂದೆ ಸರಿದ ಎಂದು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಂಬ್​ ಸ್ಫೋಟ ಸಂಚು:
ಕಾಶ್ಮೀರ
, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪುಲ್ವಾಮಾದ 28 ವರ್ಷದ ವೈದ್ಯ ಉಮರ್ ತನ್ನ ಜಾಲ ವಿಸ್ತರಿಸಿದ್ದ. ಐಇಡಿ ತುಂಬಿದ್ದ ಕಾರನ್ನು ಸ್ಫೋಟಿಸಲು ಯೋಜಿಸಿದ್ದ. ಅದನ್ನು ದೆಹಲಿಯಲ್ಲಿನ ಜನನಿಬಿಡ ಅಥವಾ ಯಾವುದಾದರೂ ಧಾರ್ಮಿಕ ಕ್ಷೇತ್ರದಲ್ಲಿ ಸ್ಫೋಟಿಸಲು ಹೊಂಚು ಹಾಕಿದ್ದ. ಆದರೆ, ಶ್ರೀನಗರ ಪೊಲೀಸರು ಗ್ಯಾನಿಯ ಬಂಧನ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಾಗ ಉಮರ್ ಭೀತಿಗೆ ಒಳಗಾಗಿ, ಅಂತಿಮವಾಗಿ ಕೆಂಪು ಕೋಟೆಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದ ಎಂದು ಉಗ್ರ ವೈದ್ಯರು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

Share This Article
error: Content is protected !!
";