ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಣಬೆಗಳಂತೆ ಹುಟ್ಟಿ ಕಣ್ಮರೆಯಾಗದೆ ಸತತ ಪರಿಶ್ರಮ, ಬದ್ಧತೆ, ಮಕ್ಕಳ ಉನ್ನತಿ ಉದ್ದೇಶದಿಂದ ಆರಂಭವಾದ ಸಂಸ್ಥೆಯೊಂದು 25 ವರ್ಷಗಳ ಸಂಭ್ರಮದಲ್ಲಿರುವುದು ಸುಲಭದ ಮಾತಲ್ಲ.
ಶಾಲೆಯಲ್ಲಿ ಶಿಸ್ತು ಬದ್ಧ ಬೋಧನೆ, ಆಟೋಟಗಳು, ವಿಶೇಷ ತರಗತಿಗಳ ಜೊತೆಯಲ್ಲಿ ಸಾಮಾಜಿಕ ಸಾಮರಸ್ಯ, ದೃಢನಂಬಿಕೆ ಮತ್ತು ಸೇವೆಯ ಬದ್ಧತೆಯೇ ಉಸಿರಾಗಿಸಿಕೊಂಡಿರುವ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ವಿದ್ಯಾ ಮಂದಿರದ ಪಾಲಕರು, ಪೋಷಕರು ರಜತ ಮಹೋತ್ಸವ ಆಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ವೈಭವದಿಂದ ಆಚರಿಸಲು ಸಜ್ಜಾಗಿದ್ದಾರೆ.
ಶಾಲೆ ಆರಂಭವಾಗಿ 25 ವರ್ಷಗಳು ಪೂರ್ತಿಯಾದುದರ ಆಚರಣೆ ಇದಾಗಿದೆ. 25ನೇ ವಾರ್ಷಿಕೋತ್ಸವದ ಸಂಭ್ರಮದ ಆಚರಣೆಯನ್ನು ‘ಬೆಳ್ಳಿಹಬ್ಬ‘ ಅಥವಾ ‘ರಜತಮಹೋತ್ಸವ‘ ಎಂದು ಕರೆಯಲಾಗುತ್ತದೆ.
ಹಿರಿಯೂರು ನಗರದ ತಾಲೂಕು ಕಚೇರಿ ಹಿಂಭಾಗದಲ್ಲಿನ ಅಕ್ಷಯ್ ಫುಡ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ವಿದ್ಯಾ ಮಂದಿರವು ಇದೀಗ 25ನೇ ವರ್ಷಕ್ಕೆ ಕಾಲಿರಿಸಿದ್ದು ರಜತ ಮಹೋತ್ಸವ ಸಂಭ್ರಮದ ಆಚರಣೆಯಲ್ಲಿದೆ. ಇದೇ 4ರ ಶನಿವಾರ ಶಾಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದಾಕ್ಷಣ ನೆನಪಿಗೆ ಬರುವುದು ವಿಶ್ವವಿಖ್ಯಾತ ಇಂಜಿನಿಯರ್ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು.
ಹಿರಿಯೂರಿನಲ್ಲಿ ನಿವೃತ್ತ ಕನ್ನಡ ಪರಿವೀಕ್ಷಕರಾಗಿದ್ದ ದಿವಂಗತ ಎಂ.ಎಸ್ ಸತ್ಯನಾರಾಯಣ ರಾವ್ ಇವರು ಈ ಸಂಸ್ಥೆ ಆರಂಭಿಸಿದರು. 1999 ರಿಂದ 2007 ರವರೆಗೆ ಗಣೇಶ್ ಪ್ರಸಾದ್ ರವರು ಇದನ್ನು ನಡೆಸಿಕೊಂಡು ಬಂದರು. ನಂತರ ಉಪನ್ಯಾಸಕರಾಗಿದ್ದ ವೈ.ಜಗದೀಶ್ ದರೆದಾರ್ ರವರು ನೂತನ ಆಡಳಿತ ಮಂಡಳಿಯೊಂದಿಗೆ ಶಾಲೆಯನ್ನು ಮುನ್ನಡೆಸುತ್ತಾ ಬಂದರು.
ಆ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯಲ್ಲಿ ಎಚ್.ಎಂ ಬಸವರಾಜ್ ಅಧ್ಯಕ್ಷರಾಗಿ, ಎಂ ಬಸವರಾಜಪ್ಪ ಕಾರ್ಯದರ್ಶಿಯಾಗಿ, ಬಿ.ವಿ ಸೂರ್ಯಪ್ರಕಾಶ್ ಖಜಾಂಚಿಯಾಗಿ, ಜಿ. ದೇವರಾಜ್, ವಿಜಯಕುಮಾರಿ, ಜಗದೀಶ್, ಜಯಲಕ್ಷ್ಮಿ, ಸಣ್ಣ ಭೀಮಣ್ಣ, ಹೇಮ ವೀರಭದ್ರಯ್ಯ ಇವರೆಲ್ಲರೂ ನಿರ್ದೇಶಕರಾಗಿ 2007 ರಿಂದ 2018ರ ವರೆಗೆ 10 ವರ್ಷಗಳ ಕಾಲ ಆಡಳಿತ ನಡೆಸಿದರು.2018 ರಿಂದ 2020 ರ ವರೆಗೆ ಜಗದೀಶ್ ದರೆದಾರ್ ಅಧ್ಯಕ್ಷರಾಗಿ, ದೇವರಾಜ್ ಉಪಾಧ್ಯಕ್ಷರಾಗಿ, ಕೆ ಆರ್ ವೀರಭದ್ರಯ್ಯ ಕಾರ್ಯದರ್ಶಿಯಾಗಿ, ಸಣ್ಣ ಬೀಮಣ್ಣ ಖಜಾಂಚಿಯಾಗಿ ಹೆಚ್.ಎಂ.ಬಸವರಾಜ್ , ಎಂ ಬಸವರಾಜಪ್ಪ ಬಿ.ವಿ. ಸೂರ್ಯಪ್ರಕಾಶ್ ಇವರು ನಿರ್ದೇಶಕರಾದರು.
2020 ರಿಂದ 24ರ ವರೆಗೆ ಜಿ ದೇವರಾಜ್ ಅಧ್ಯಕ್ಷರಾಗಿ, ಎಂ ಬಸವರಾಜಪ್ಪ ಉಪಾಧ್ಯಕ್ಷರಾಗಿ, ಕೆ ಆರ್ ವೀರಭದ್ರಯ್ಯ ಕಾರ್ಯದರ್ಶಿಯಾಗಿ, ಹೆಚ್ ಎಂ ಬಸವರಾಜ್, ಬಿ.ವಿ ಸೂರ್ಯ ಪ್ರಕಾಶ್, ಶ್ರೀಹರ್ಷ ಜಗದೀಶ್ ಇವರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
2024 ರಿಂದ ಪುನಃ ಆಡಳಿತ ಮಂಡಳಿ ಬದಲಾವಣೆಯಾಗಿದ್ದು ಇದೀಗ ಎಂ ಬಸವರಾಜಪ್ಪನವರು ಅಧ್ಯಕ್ಷರಾಗಿರುತ್ತಾರೆ. ಬಿ ವಿ ಸೂರ್ಯ ಪ್ರಕಾಶ್ ಉಪಾಧ್ಯಕ್ಷರಾಗಿ ಹೆಚ್.ಎಂ ಬಸವರಾಜ್ ಕಾರ್ಯದರ್ಶಿಯಾಗಿ, ಸಣ್ಣ ಭೀಮಣ್ಣ ಖಜಾಂಚಿಯಾಗಿ ಕೆ.ಆರ್ ವೀರಭದ್ರಯ್ಯ, ಜಿ ದೇವರಾಜ್, ಶ್ರೀ ಹರ್ಷ ಜಗದೀಶ್ ಇವರು ನಿರ್ದೇಶಕರಾಗಿರುತ್ತಾರೆ. ಎಲ್ ಕೆ ಜಿ ಯಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಯುತ್ತಿದೆ. ಶಾಲೆಯು ಮೊದಲು ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗ ಇತ್ತು 2013ರಲ್ಲಿ ಶಾಲೆಯು ಈಗ ಇರುವ ಕಟ್ಟಡಕ್ಕೆ ಬಂತು. ಶಾಲೆಯಲ್ಲಿ ವಾಹನ ಸೌಕರ್ಯ ಕಲ್ಪಿಸಲಾಗಿದೆ.
ಆರಂಭದಲ್ಲಿ 180 ಜನ ವಿದ್ಯಾರ್ಥಿಗಳಿದ್ದು ಇದೀಗ 1೦56 ಜನ ವಿದ್ಯಾರ್ಥಿಗಳಿರುತ್ತಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಸ್ಮಾರ್ಟ್ ಬೋರ್ಡ್ ಗಳನ್ನು ಬಳಸಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್ ಇರುತ್ತದೆ. ಪ್ರತಿ ವರ್ಷ ಮಕ್ಕಳಿಗೆ ಪ್ರವಾಸ ಕೈಗೊಳ್ಳಲಾಗುತ್ತದೆ. ಇಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಶಾಲೆಯಲ್ಲಿ 58 ಜನ ನೌಕರರು ಇರುತ್ತಾರೆ ಉತ್ತಮ ವೇತನವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆ ಎಂದು ಹೆಸರಾಗಿದೆ, ಗ್ರಾಮಾಂತರ ಹಾಗೂ ನಗರದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುವುದು ನಮ್ಮ ಉದ್ದೇಶ ಎಂದು ಆಡಳಿತ ಮಂಡಳಿಯವರು ಹೇಳುತ್ತಾರೆ.
ರಜತ ಮಹೋತ್ಸವ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ಹಾಗೂ ರಜತ ರತ್ನ ಪ್ರಶಸ್ತಿಗಳನ್ನು ನೀಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ ಆಡಳಿತ ಮಂಡಳಿಯಲ್ಲಿ ಉತ್ತಮ ಶಿಕ್ಷಣ ತಜ್ಞರಿದ್ದು ಶಾಲೆಯನ್ನು ದಿನದಿಂದ ದಿನಕ್ಕೆ ಪ್ರಗತಿ ಪಥದತ್ತ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಿರಿಯೂರಿಗೆ ಕಳಸಪ್ರಾಯವಾಗಿದೆ. ಈ 25 ವರ್ಷಗಳಲ್ಲಿ ಸಾವಿರಾರು ಮಕ್ಕಳ ಭವಿಷ್ಯವನ್ನು ಈ ಸಂಸ್ಥೆ ಕಟ್ಟಿಕೊಡುವುದರ ಮೂಲಕ ಜನಮನದಲ್ಲಿ ಉಳಿದಿದೆ.