ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಧುನಿಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಪದವಿ ವಿದ್ಯಾರ್ಥಿಗಳಿಗೆ ವಿವಿಧ ಜ್ಞಾನ, ಕೌಶಲ್ಯ ತುಂಬಾ ಅಗತ್ಯವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ ಎಚ್ ಕೇಶವ ಹೇಳಿದರು.
ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾ ಸಂಸ್ಥೆ ಇವುಗಳ ಸಹಯೋಗದಲ್ಲಿ ಮಂಗಳವಾರ ನಗರದ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಚಿತ್ರದುರ್ಗ ಇಲ್ಲಿ ಆಯೋಜಿಸಿದ್ದ ಎಫ್.ಕೆ.ಸಿ.ಸಿ.ಐ ಇನೊ ಮಂಥನ್ –2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ವಾಣಿಜ್ಯ ಮಹಾ ಸಂಸ್ಥೆ ರೂಪಿಸಿರುವ ಯೋಜನೆಯ ಸದುಪಯೋಗ ಪಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರು ಮಂಥನ್ –2026 ಎಫ್.ಕೆ.ಸಿ.ಸಿ.ಐ ಛೇರ್ಮನ್ ಶ್ರವಣ ಗುಡುತ್ತೂರು ಮಾತನಾಡಿ, ಪದವಿ ನಂತರದ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಮುನ್ನ ಪೂರ್ವಾಲೋಚನೆ ಮಾಡಬೇಕು. ಮಂಥನ ವೇದಿಕೆ ಬಳಸಿಕೊಂಡು ಕೃಷಿ, ತಂತ್ರಜ್ಞಾನ, ವ್ಯವಹಾರ ಕ್ಷೇತ್ರ ಅಭಿವೃದ್ಧಿಪಡಿಸುವುದಲ್ಲದೆ. ವಿವಿಧ ಕೌಶಲ್ಯಕ್ಕೆ ಅನುಗುಣವಾಗಿ ದ್ವಿತೀಯ ಪಿಯುಸಿ ಉತ್ತಿರ್ಣರಾದ ವಿದ್ಯಾರ್ಥಿಗಳು ಉದ್ಯೋಗ ಬಯಸಿ ಆನ್ ಲೈನ್ ಮೂಲಕ ಮಂಥನಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ವೃತ್ತಿ ಬದುಕಿನ ಬಗ್ಗೆ ತಜ್ಙರಿಂದ 6 ತಿಂಗಳ ತನಕ ಉಚಿತವಾಗಿ ಸೂಕ್ತ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ವ್ಯಾಪಾರ ಮತ್ತು ವಹಿವಾಟು ಎನ್ನುವುದು ಒಂದು ವಿಶೇಷ ಜ್ಞಾನ. ಇದರಿಂದ ಜ್ಞಾನ ವಿಕಸಿತವಾಗುತ್ತದೆ. ಬದುಕಿನ ಗುರಿ ಮತ್ತು ಆ ಗುರುಗಳನ್ನು ಸಾಧಿಸುವ ತಂತ್ರವನ್ನು ಅರಿತುಕೊಳ್ಳಬೇಕಿದೆ. ಎಫ್.ಕೆ.ಸಿ.ಸಿ.ಐ ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪದವಿ ಪಡೆದ ನಂತರ ಸಂಘಟನೆ, ಕಾನೂನು ಮತ್ತು ಮೌಲ್ಯಗಳನ್ನು ಒಳಗೊಂಡ ಒಂದು ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕಿ ಪ್ರೊ ತಾರಿಣಿ ಶುಭದಾಯಿನಿ, ಸಹ ಸಂಚಾಲಕಿ ಪ್ರೊ ಕೆ ಲೀಲಾವತಿ, ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ ಬಿ ಸುರೇಶ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ ಶಕುಂತಲಾ, ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಪ್ರೊ ರೇವಣ ಸಿದ್ದಪ್ಪ, ಪ್ರೊ ಮುರಳೀಧರ ಇದ್ದರು.

