ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗರ್ಭಿಣಿ ಮತ್ತು ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಮಾಹಿತಿ ಪೌಷ್ಟಿಕ ಆಹಾರ, ಕುಟುಂಬ ಯೋಜನೆಗಳು, ಅಪೌಷ್ಟಿಕತೆ ಮಕ್ಕಳ ಆರೈಕೆ ಕುರಿತು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಾಯಂದಿರಿಗೆ ಮನದಟ್ಟ ಮಾಡಿ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಬಿಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಸೇರಿದ ಕೆ. ಬಳ್ಳೇಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನವನ್ನು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ಹಲವು ಕಾರ್ಯಕ್ರಮಗಳಿವೆ. ಆರಂಭದಲ್ಲಿ ಮಕ್ಕಳಲ್ಲಿನ ಪೌಷ್ಟಿಕಾಂಶದ ಕೊರತೆ ಗುರುತಿಸಬೇಕು. ಅಂತಹ ಮಕ್ಕಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಮಗುವಿನ ಬೆಳವಣಿಗೆಯನ್ನು ಬೆಂಬಲಿಸುವುದು ಮುಖ್ಯ ಎಂದು ಸಣ್ಣರಂಗಮ್ಮ ತಿಳಿಸಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದರೆ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ ಆಗಲಿದೆ. ಇದು ದೌರ್ಬಲ್ಯ ಮತ್ತು ರೋಗಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ಇಂತಹ ಮಕ್ಕಳಿಗೆ ಸೂಕ್ತವಾದ ಪೋಷಣೆ ಮಾಡುವುದರ ಜೊತೆಯಲ್ಲಿ ವೈದ್ಯಕೀಯ ಆರೈಕೆ ಮಾಡುವುದು ಬಹಳ ಮುಖ್ಯ ತಿಳಿಸಿದರು.
ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಬೇಕಾದರೆ, ಅವರ ಎತ್ತರ ಮತ್ತು ತೂಕವನ್ನು ನಿಯಮಿತವಾಗಿ ಅಳೆಯಬೇಕು. ಬೆಳವಣಿಗೆಯನ್ನು ಚಾರ್ಟ್‍ಗಳಲ್ಲಿ ದಾಖಲಿಸಬೇಕು. ಸಣ್ಣ ಮಕ್ಕಳಿಗೆ, ಮಧ್ಯದ ಮೇಲಿನ ತೋಳಿನ ಸುತ್ತಳತೆಯನ್ನು ಅಳೆಯುವ ಮೂಲಕ ಅಪೌಷ್ಟಿಕತೆ ಗುರುತಿಸಬಹುದಾಗಿದೆ ಎಂದು ಹೇಳಿದರು.
ಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಅವರ ವಯಸ್ಸು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸಮತೋಲಿತ ಆಹಾರ ಒದಗಿಸಬೇಕು. ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿರುವ ಆಹಾರ ನೀಡಬೇಕು ಎಂದು ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಸೋಂಕುಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಪವಿತ್ರ ಮಾತನಾಡಿ ಪೋಷಕರಿಗೆ ಅಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಆರಂಭದಲ್ಲೇ ಮಕ್ಕಳಿಗೆ ಸರಿಯಾದ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವುದು ಮುಖ್ಯ. ಆರೋಗ್ಯ ಕಾರ್ಯಕರ್ತರು ಮತ್ತು ಪೌಷ್ಟಿಕಾಂಶ ತಜ್ಞರು ಈ ನಿಟ್ಟಿನಲ್ಲಿ ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಯನ್ನು ಸಮುದಾಯ ಮಟ್ಟದಲ್ಲಿಯೂ ಮಾಡಬೇಕು. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಸಮುದಾಯ ನಾಯಕರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಪ್ರಾಥಮಿಕ ಸುರಕ್ಷಾ ಅಧಿಕಾರಿ ಶೋಭಾ ಡಿಎಸ್ ಮಾತನಾಡಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಮೂರು ವರ್ಷ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಮಗು ಮತ್ತು ತಾಯಿಗೆ ಆಗುವ ಉಪಯೋಗ ಬಹಳ ಇರುತ್ತದೆ ಎಂದು ತಿಳಿಸಿದರು.
ಕಾಲ ಕಾಲಕ್ಕೆ ವೈದ್ಯರ ಸಲಹೆ ಸೂಚನೆ ಮೇರೆಗೆ ಮಗುವಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳಿಗೆ ಬರುವ ಹಲವು ರೋಗಗಳನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ ಎನ್ವಿ ಬಿಡಿಸಿಪಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಗೌರಮ್ಮ, ಸುಧಾ, ಆಶಾ ಕಾರ್ಯಕರ್ತೆ ಮಲ್ಲಮ್ಮ, ಶಾಲಾ ಶಿಕ್ಷಕಿ ವಸಂತಾ ಮತ್ತಿತರರು ಇದ್ದರು.